ಧರ್ಮದ ಹೆಸರಿನಲ್ಲಿ ಮತ ಯಾಚನೆ: ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ದೇವರು ಮತ್ತು ಪೂಜಾ ಸ್ಥಳದ ಹೆಸರಿನಲ್ಲಿ ಮತ ಯಾಚಿಸುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಏಪ್ರಿಲ್ 9 ರಂದು ಉತ್ತರ ಪ್ರದೇಶದ ಪಿಲಿಭಿಟ್‌ನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರೂ ಆಗಿರುವ ಪ್ರಧಾನಿ ಮೋದಿ ಅವರ ಭಾಷಣವನ್ನು ಉಲ್ಲೇಖಿಸಿ ಆನಂದ ಎಸ್ ಜೊಂಧಲೆ ಎಂಬ ವಕೀಲರು ಅರ್ಜಿ ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿಯವರು “ಹಿಂದೂ ದೇವತೆಗಳು ಮತ್ತು ಹಿಂದೂ ಆರಾಧನಾ ಸ್ಥಳಗಳ ಜೊತೆಗೆ ಸಿಖ್ ದೇವತೆಗಳು ಮತ್ತು ಸಿಖ್ ಆರಾಧನಾ ಸ್ಥಳಗಳ” ಹೆಸರಿನಲ್ಲಿ ಬಿಜೆಪಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ. ಹೀಗಾಗಿ ಆರು ವರ್ಷಗಳ ಅವಧಿಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಪ್ರಧಾನಿ ಮೋದಿಯವರನ್ನು ನಿರ್ಬಂಧಿಸಬೇಕು ಎಂದು ಅವರು ಕೋರಿದ್ದಾರೆ.

ತಾನು ರಾಮ ಮಂದಿರ ನಿರ್ಮಿಸಿದ್ದಾಗಿ ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಅಭಿವೃದ್ಧಿಪಡಿಸಿದ್ದಾಗಿ ಗುರುದ್ವಾರಗಳಿಗೆ ಸಂಬಂಧಿಸಿದ ವಸ್ತುಗಳ ಜಿಎಸ್‌ಟಿ ತೆಗೆದುಹಾಕಿದ್ದಾಗಿ ಜೊತೆಗೆ ಅಫ್ಘಾನಿಸ್ತಾನದಿಂದ ಗುರು ಗ್ರಂಥ ಸಾಹಿಬ್‌ನ ಪ್ರತಿಗಳನ್ನು ಮರಳಿ ತಂದಿದ್ದಾಗಿ ಹೇಳಿ ಮೋದಿಯವರು ಮತ ಯಾಚನೆ ಮಾಡಿದ್ದಾರೆ ಎಂದು ಅರ್ಜಿದಾರರು ದೂರಿನಲ್ಲಿ ತಿಳಿಸಿದ್ದಾರೆ.
ಮೋದಿಯವರು ನೀತಿ ಸಂಹಿತೆಯ ನಿಯಮಾವಳಿಗಳ ಸಂಪುಟ III ರ ಸಾಮಾನ್ಯ ನಡಾವಳಿ I(1) ಮತ್ತು (3)ನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
“ಜಾತಿ ಅಥವಾ ಸಮುದಾಯದ ಭಾವನೆಗಳ ಹೆಸರಿನಲ್ಲಿ ಮತ ಯಾಚನೆ ನಡೆಯಬಾರದು ಎಂದು ಅದು ಹೇಳುತ್ತದೆ. ಮಸೀದಿ, ಚರ್ಚ್‌ಗಳು, ದೇವಾಲಯಗಳು ಅಥವಾ ಇತರ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕಾಗಿ ವೇದಿಕೆಯಾಗಿ ಬಳಸಬಾರದು” ಎಂದು ಜೊಂಧಲೆ ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement