ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

ನವದೆಹಲಿ: ದೆಹಲಿ ವಕ್ಫ್ ಮಂಡಳಿಯ ಅಕ್ರಮ ನೇಮಕಾತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಬಂಧಿಸಿದೆ ಎಂದು ವರದಿಯಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಅವರು ಇ.ಡಿ. ಮುಂದೆ ಹಾಜರಾಗಿದ್ದರು. ಸೋಮವಾರ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತರ ಇದು ನಡೆದಿದೆ.
ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ದೀಪಂಕರ ದತ್ತಾ ಅವರ ಸುಪ್ರೀಂ ಕೋರ್ಟ್‌ ಪೀಠವು ಏಪ್ರಿಲ್ 18 ರಂದು ಬೆಳಿಗ್ಗೆ 11 ಗಂಟೆಗೆ ಇ.ಡಿ. ಮುಂದೆ ಹಾಜರಾಗುವಂತೆ ಖಾನ್ ಅವರಿಗೆ ಸೂಚಿಸಿದೆ.
ಇ.ಡಿ. ಕಚೇರಿಯನ್ನು ಪ್ರವೇಶಿಸುವ ಮೊದಲು, ಖಾನ್ – ಸುದ್ದಿಗಾರರೊಂದಿಗೆ ಮಾತನಾಡುತ್ತಾ – ತಾನು ವಕ್ಫ್ ಮಂಡಳಿಯ ಅಧ್ಯಕ್ಷನಾಗಿದ್ದಾಗ ನಿಯಮಗಳನ್ನು ಅನುಸರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ., ಕಾನೂನು ಅಭಿಪ್ರಾಯಗಳನ್ನು ತೆಗೆದುಕೊಂಡ ನಂತರ ಮತ್ತು 2013 ರಲ್ಲಿ ಜಾರಿಗೆ ಬಂದ ಹೊಸ ಕಾಯಿದೆ (ಬೋರ್ಡ್‌ಗೆ) ಪ್ರಕಾರ ಎಲ್ಲವನ್ನೂ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಅಮಾನತುಲ್ಲಾ ಖಾನ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣವು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಎಫ್‌ಐಆರ್ ಮತ್ತು ಮೂರು ದೆಹಲಿ ಪೊಲೀಸ್ ದೂರುಗಳಿಂದ ಉದ್ಭವಿಸಿದೆ.
ಕೇಂದ್ರೀಯ ತನಿಖಾ ಸಂಸ್ಥೆಯ ಪ್ರಕಾರ, ಅಮಾನತುಲ್ಲಾ ಖಾನ್ ಅವರು ದೆಹಲಿ ವಕ್ಫ್ ಬೋರ್ಡ್‌ನಲ್ಲಿ ಸಿಬ್ಬಂದಿ ಅಕ್ರಮ ನೇಮಕಾತಿಯ ಮೂಲಕ “ಅಪರಾಧದ ಬೃಹತ್ ಆದಾಯವನ್ನು” ನಗದು ರೂಪದಲ್ಲಿ ಸಂಪಾದಿಸಿದ್ದಾರೆ ಮತ್ತು ಅವರ ಸಹಚರರ ಹೆಸರಿನಲ್ಲಿ ಸ್ಥಿರ ಆಸ್ತಿಗಳನ್ನು ಖರೀದಿಸಲು ಹೂಡಿಕೆ ಅದನ್ನು ಮಾಡಿದ್ದಾರೆ.
ವಕ್ಫ್ ಮಂಡಳಿಯಲ್ಲಿ ಸಿಬ್ಬಂದಿ “ಅಕ್ರಮ ನೇಮಕಾತಿ” ನಡೆದಿದೆ ಮತ್ತು ಖಾನ್ ಅವರ ಅಧ್ಯಕ್ಷತೆಯಲ್ಲಿ (2018-2022) ವಕ್ಫ್ ಬೋರ್ಡ್ ಆಸ್ತಿಗಳನ್ನು ಅನ್ಯಾಯವಾಗಿ ಗುತ್ತಿಗೆ ನೀಡುವ ಮೂಲಕ “ಅಕ್ರಮ ವೈಯಕ್ತಿಕ ಲಾಭ” ಮಾಡಿಕೊಳ್ಳಲಾಗಿದೆ ಎಂದು ಇ.ಡಿ. ಹೇಳಿಕೆಯಲ್ಲಿ ಆರೋಪಿಸಿದೆ.

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

ಎಎಪಿ ನಾಯಕ ಅಮಾನತುಲ್ಲಾ ಖಾನ್ “ನಗದು ರೂಪದಲ್ಲಿ ಅಕ್ರಮವಾಗಿ ಭಾರೀ ಆದಾಯವನ್ನು ಗಳಿಸಿದ್ದಾರೆ ಮತ್ತು ಈ ನಗದು ಮೊತ್ತವನ್ನು ದೆಹಲಿಯಲ್ಲಿ ಅವರ ಸಹಚರರ ಹೆಸರಿನಲ್ಲಿ ವಿವಿಧ ಸ್ಥಿರ ಆಸ್ತಿಗಳನ್ನು ಖರೀದಿಸಲು ಹೂಡಿಕೆ ಮಾಡಲಾಗಿದೆ” ಎಂದು ಇ.ಡಿ. ಹೇಳಿದೆ.
ಎಎಪಿ ನಾಯಕ ಅಮಾನತುಲ್ಲಾ ಖಾನ್ ಅವರ ಮೂವರು ಆಪಾದಿತ ಸಹಚರರಾದ ಜೀಶಾನ್ ಹೈದರ್, ದೌದ್ ನಾಸಿರ್ ಮತ್ತು ಜಾವೇದ್ ಇಮಾಮ್ ಸಿದ್ದಿಕ್ ಅವರನ್ನು ಸಹ ಜಾರಿ ನಿರ್ದೇಶನಾಲಯವು ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಹೆಸರಿಸಲಾಗಿದೆ.
ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗವಣೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಎಎಪಿ ನಾಯಕ ಸಂಜಯ್ ಸಿಂಗ್ ಅವರು, ಖಾನ್ ಅವರ ಬಂಧನದ ಬಗ್ಗೆ ಪ್ರತಿಕ್ರಿಯಿಸಿ, ಮಂತ್ರಿಗಳು ಮತ್ತು ಶಾಸಕರ ವಿರುದ್ಧ “ನಕಲಿ ಪ್ರಕರಣಗಳನ್ನು ಮಾಡುವ ಮೂಲಕ ಅವರನ್ನು ಬಂಧಿಸಲಾಗುತ್ತಿದೆ” ಎಂದು ಹೇಳಿದ್ದಾರೆ. ತನಿಖಾ ಸಂಸ್ಥೆಯು ಅಮಾನತುಲ್ಲಾ ಖಾನ್ ವಿರುದ್ಧ “ಆಧಾರರಹಿತ ಪ್ರಕರಣ” ವನ್ನು ರಚಿಸಿದೆ ಎಂದು ಅವರು ಹೇಳಿದ್ದಾರೆ.

ಪಕ್ಷದ ಎಲ್ಲಾ ನಾಯಕ ಮತ್ತು ಕಾರ್ಯಕರ್ತರನ್ನು ಜೈಲಿಗೆ ಹಾಕಿದರೂ, ದೆಹಲಿಯ ಜನರು ಎಎಪಿಗೆ ಮತ ಹಾಕುತ್ತಾರೆ ಎಂದು ಆಪ್ ಸಚಿವರಾದ ಅತಿಶಿ ಹೇಳಿದ್ದಾರೆ.
“ನೀವು ನಮ್ಮನ್ನು ಎಷ್ಟು ಹೆದರಿಸಿದರೂ ಪರವಾಗಿಲ್ಲ; ನಾವು ತಲೆಬಾಗಲು ಹೋಗುವುದಿಲ್ಲ, ನಾವು ಹೆದರುವುದಿಲ್ಲ! ನಿಮ್ಮ ಸರ್ವಾಧಿಕಾರದ ವಿರುದ್ಧ ನಾವು ಬಲವಾಗಿ ಹೋರಾಡುವುದನ್ನು ಮುಂದುವರಿಸುತ್ತೇವೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಎಪಿಯ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಸ್ತುತ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರಮುಖ ಸುದ್ದಿ :-   50 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ : ಮಕ್ಕಳನ್ನು ಮನೆಗೆ ಕಳುಹಿಸಿದ ಶಾಲೆಗಳು, ಪರೀಕ್ಷೆಗಳು ಸ್ಥಗಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement