ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು : ನ್ಯಾಯಾಲಯದ ಆದೇಶ ಹಾಗೂ ನಿರ್ದೇಶಗಳನ್ನು ಪಾಲಿಸಲು ರಾಜ್ಯ ಸರ್ಕಾರವು ಎಲ್ಲಾ ಇಲಾಖೆಗಳು ಮತ್ತದರ ಪ್ರಾಧಿಕಾರಗಳಲ್ಲಿ ಆಂತರಿಕ ಮೇಲ್ವಿಚಾರಣಾ ವ್ಯವಸ್ಥೆ ಆರಂಭಿಸುವ ವಿಚಾರದ ಕುರಿತಾಗಿ ರಾಜ್ಯ ಸರ್ಕಾರದ ಮುಖ್ಯ ಕಾಯದರ್ಶಿ ಮತ್ತು ಸರ್ಕಾರದ 41 ಇಲಾಖೆಗಳಿಗೆ ಮಂಗಳವಾರ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಾಲಯಗಳ ಆದೇಶ ಪಾಲಿಸಲು ಸರ್ಕಾರ ಮತ್ತದರ ಪ್ರಾಧಿಕಾರಗಳು ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ನೋಟಿಸ್‌ ಜಾರಿಗೊಳಿಸಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕೃಷಿ, ಕಂದಾಯ, ಆರೋಗ್ಯ ಹಾಗೂ ಗೃಹ ಇಲಾಖೆ ಸೇರಿದಂತೆ 41 ಇಲಾಖೆಗಳನ್ನು, ಬಿಡಿಎ, ಬಿಬಿಎಂಪಿ ಆಯುಕ್ತರು ಮತ್ತು ಕೆಐಎಡಿಬಿ ಕಾರ್ಯಕಾರಿ ನಿರ್ದೇಶಕರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಅರ್ಜಿದಾರರ ಪರ ವಕೀಲ ಮಧುಕರ ಎಂ. ದೇಶಪಾಂಡೆ ಅವರ ವಾದ ಆಲಿಸಿದ ವಿಭಾಗೀಯ ಪೀಠವು ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್‌ ನೀಡಿ ವಿಚಾರಣೆ ಮುಂದೂಡಿದೆ.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

ನ್ಯಾಯಾಲಯಗಳ ಆದೇಶ ಪಾಲಿಸಲು ಸರ್ಕಾರ ಮತ್ತದರ ಪ್ರಾಧಿಕಾರಗಳು ನಿರ್ಲಕ್ಷ್ಯ ಹಾಗೂ ವಿಳಂಬ ನೀತಿ ಅನುಸರಿಸುತ್ತಿವೆ. ನ್ಯಾಯಾಲಯಗಳ ಮೊರೆ ಹೋಗುವುದು ಸಾರ್ವಜನಿಕರ ಮೂಲಭೂತ ಹಕ್ಕು. ನ್ಯಾಯಾಲಯಗಳ ಆದೇಶ ಪಾಲಿಸಲು ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷವನ್ನು ಒಪ್ಪುವಂತದಲ್ಲ ಎಂದು ಹೈಕೋರ್ಟ್‌ ವಿಭಾಗೀಯ ಪೀಠವು 2024ರ ಏಪ್ರಿಲ್‌ 8ರ ತನ್ನ ಆದೇಶದಲ್ಲಿ ತಿಳಿಸಿತ್ತು.

ಸರ್ಕಾರದ ಇಲಾಖೆಗಳು ನ್ಯಾಯಾಲಯಗಳ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಅದಕ್ಕಾಗಿ ಎಲ್ಲಾ ಇಲಾಖೆಗಳಲ್ಲಿ ಆಂತರಿಕ ಮೇಲ್ವಿಚಾರಣಾ ಸಮಿತಿ ಆರಂಭಿಸಬೇಕಿದೆ. ಈ ಕುರಿತು ಅಗತ್ಯ ನಿರ್ದೇಶನ ನೀಡಬೇಕಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಅದರ ಎಲ್ಲಾ ಇಲಾಖೆಗಳನ್ನು ಪ್ರತಿವಾದಿ ಮಾಡಿ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವಂತೆ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಹೈಕೋರ್ಟ್‌ ವಿಭಾಗೀಯ ಪೀಠವು 2024ರ ಏಪ್ರಿಲ್‌ 8ರಂದು ನಿರ್ದೇಶಿಸಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement