ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ಹುಬ್ಬಳ್ಳಿ: ಹತ್ಯೆಗೀಡಾದ ನೇಹಾ ಹಿರೇಮಠ (Neha Hiremath) ಮನೆಗೆ ಗುರುವಾರ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನೇಹಾ ತಂದೆ ನಿರಂಜನ ಹಿರೇಮಠ, ತಾಯಿ ಗೀತಾ ಹಿರೇಮಠ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು , ನಿಮ್ಮ ಕುಟುಂಬದ ಜೊತೆಗೆ ನಾವಿದ್ದೇವೆ ಅಂತ ಭರವಸೆ ನೀಡಿದರು. ಇದೊಂದು ದುರದೃಷ್ಟ ಘಟನೆ, ಸಿಐಡಿಗೆ ಕೊಟ್ಟಿದ್ದೇವೆ. ಎಲ್ಲ ಮಗ್ಗಲುಗಳಲ್ಲಿಯೂ ತನಿಖೆ ಮಾಡಲು ಸಿಐಡಿಗೆ ಸೂಚಿಸಿದ್ದೇನೆ ಎಂದರು.
ನಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಇದೇ ವೇಳೆ ನೇಹಾ ತಂದೆ-ತಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕೈಮುಗಿದು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಲಾಗಿದೆ. ಖಂಡಿತವಾಗಿಯೂ ಆರೋಪಿಗೆ ತಕ್ಕ ಶಿಕ್ಷೆಯಾಗುತ್ತದೆ ಎಂದು ಭರವಸೆ ನೀಡಿದರು. ಇದು ಅಮಾನವೀಯ ಕೃತ್ಯ. ಇದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೇಹಾ ಹಿರೇಮಠ ಹತ್ಯೆ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ನೇಹಾ ಕೊಲೆ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯ ರಚನೆ ಮಾಡಿದ್ದೇವೆ ಎಂದು ತಿಳಿಸಿದರು.
ನೇಹಾ ಹತ್ಯೆ ಪ್ರಕರಣದಲ್ಲಿ ನಾನು ರಾಜಕೀಯ ಮಾಡಲು ಇಷ್ಟಪಡುವುದಿಲ್ಲ. ಕಾಂಗ್ರೆಸ್ ರಾಜಕೀಯ ಮಾಡಿಲ್ಲ. ನೇಹಾ ಕುಟುಂಬದವರು ತುಂಬಾ ದುಃಖದಲ್ಲಿದ್ದಾರೆ. ನಿರಂಜನ ಹಿರೇಮಠ ಅವರ ಕುಟುಂಬದ ಜೊತೆಗೆ ನಾವಿದ್ದೇವೆ ಎಂದು ಅಭಯ ನೀಡಿದರು.
ನಿರಂಜನ ಹಿರೇಮಠ ಕುಟುಂಬಕ್ಕೆ ಸೂಕ್ತ ರಕ್ಷಣೆಯನ್ನು ಕೊಡುತ್ತೇವೆ. ಎಲ್ಲ ಆಯಾಮಗಳಲ್ಲೂ ತನಿಖೆ ಮಾಡಲು ಸೂಚಿಸಿದ್ದೇನೆ ಎಂದು ಅವರು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

ಸಾವಿಗೆ ಸಾವೇ ಶಿಕ್ಷೆಯಾಗಬೇಕು….
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯ ನಂತರ ಮಾತನಾಡಿದ ನೇಹಾ ತಂದೆ ನಿರಂಜನ ಹಿರೇಮಠ ಅವರು, ಮುಖ್ಯಮಂತ್ರಿಗಳ ಬಳಿಕ ಮಗಳ ಸಾವಿಗೆ ನ್ಯಾಯ ಕೇಳಿದ್ದೇನೆ. ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸುವಂತೆ ಅವರನ್ನು ಕೋರಲಾಗಿದೆ ಎಂದು ಹೇಳಿದರು.
ವಿಶೇಷ ನ್ಯಾಯಲಯದಲ್ಲಿ 90 ರಿಂದ 120 ದಿನಗಳಲ್ಲಿ ನ್ಯಾಯ ಸಿಗಬೇಕು. ಸಾವಿಗೆ ಸಾವೇ ಶಿಕ್ಷೆಯಾಗಬೇಕು. ಆದ್ದರಿಂದ ಫಯಾಜ್ ನನ್ನು ಗಲ್ಲಿಗೇರಿಸಿದ ಮೇಲೆಯೆ ನಮಗೆ ಸಮಾಧಾನ. ಅಲ್ಲಿಯವರೆಗೂ ಹೋರಾಟ ಮಾಡುತ್ತೇವೆ, ಸರ್ಕಾರ ನಮ್ಮ ಬೆನ್ನಿಗೆ ಇರಬೇಕು ಎಂದು ಅವರು ಕೋರಿದರು.
ಮಗಳ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಕೊಟ್ಟಿದ್ದು ಸಂತೋಷ ತಂದಿದೆ. ಕಾಂಗ್ರೆಸ್ ಮುಖಂಡರೆಲ್ಲ ನನ್ನ ಬೆನ್ನಿಗೆ ನಿಂತಿದ್ದಾರೆ. ಕೋಪದಲ್ಲಿ ಯಾರಿಗಾದರೂ ನೋವು ತರುವ ಹಾಗೆ ಮಾತಾಡಿದ್ದರೆ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದರು.
ಏ.18 ರಂದು ಕಾಲೇಜಿನಲ್ಲಿ ನೇಹಾ ಹಿರೇಮಠ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು. ಫಯಾಜ್‌ ಎಂಬಾತ ನೇಹಾಳಿಗೆ 9 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement