ಲೋಕಸಭೆ ಚುನಾವಣೆ ವೇಳೆಯೇ ಕಾಂಗ್ರೆಸ್ಸಿಗೆ ಶಾಕ್‌ : ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ

ನವದೆಹಲಿ: ಲೋಕಸಭೆ ಚುನಾವಣೆ ನಡುವೆಯೇ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕಾಂಗ್ರೆಸ್‌ ಪಕ್ಷದ ದೆಹಲಿ ರಾಜ್ಯಾಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರಾಜೀನಾಮೆ ಪತ್ರದಲ್ಲಿ ಅವರು ತಮ್ಮ ರಾಜೀನಾಮೆಗೆ 2024 ರ ಲೋಕಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಜೊತೆಗೆ ಕಾಂಗ್ರೆಸ್‌ ಮಾಡಿಕೊಂಡ ಚುನಾವಣಾ ಮೈತ್ರಿ ಬಗ್ಗೆ ಉಲ್ಲೇಖಿಸಿದ್ದಾರೆ. ಪಕ್ಷದ ವಿರುದ್ಧ ಸುಳ್ಳು, ಕಪೋಲಕಲ್ಪಿತ ಮತ್ತು ದುರುದ್ದೇಶಪೂರಿತ ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿದ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದನ್ನು ದೆಹಲಿ ಕಾಂಗ್ರೆಸ್ ಘಟಕವು ವಿರೋಧಿಸಿದೆ. ಆದರೆ ಈ ವಿರೋಧದ ನಡುವೆಯೂ ಕಾಂಗ್ರೆಸ್‌ ಪಕ್ಷವು ದೆಹಲಿಯಲ್ಲಿ ಎಎಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಯಿತು ಎಂದು ಲವ್ಲಿ ಹೇಳಿದ್ದಾರೆ.

“ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು, ಕಪೋಲಕಲ್ಪಿತ ಮತ್ತು ದುರುದ್ದೇಶಪೂರಿತ ಭ್ರಷ್ಟಾಚಾರ ಆರೋಪಗಳನ್ನು ಹೊರಿಸುವ ಏಕೈಕ ಆಧಾರದ ಮೇಲೆ ರಚಿಸಲಾದ ಪಕ್ಷದೊಂದಿಗಿನ ಮೈತ್ರಿಗೆ ದೆಹಲಿ ಕಾಂಗ್ರೆಸ್ ಘಟಕವು ವಿರುದ್ಧವಾಗಿತ್ತು. ಅದರ ಹೊರತಾಗಿಯೂ, ಪಕ್ಷವು ದೆಹಲಿಯಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ಮಾಡಿತು.” ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಆಗಸ್ಟ್ 2023 ರಲ್ಲಿ ದೆಹಲಿ ರಾಜ್ಯಾಧ್ಯಕ್ಷ ಹುದ್ದೆಗೆ ನೇಮಕಗೊಂಡ ಲವ್ಲಿ ಅವರು ಪಕ್ಷದ ಕಾರ್ಯಕರ್ತರ ಹಿತಾಸಕ್ತಿಗಳನ್ನು ರಕ್ಷಿಸಲು ಸಾಧ್ಯವಿಲ್ಲದ ಕಾರಣ, ಈ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸೇನೆ ಬರ್ಲಿ ನೋಡ್ಕೊಳ್ತೇನೆ..; ಎನ್‌ಕೌಂಟರಿನಲ್ಲಿ ಸಾಯುವ ಸ್ವಲ್ಪ ಮೊದಲು ತಾಯಿ ಜೊತೆ ಭಯೋತ್ಪಾದಕ ವೀಡಿಯೊ ಕರೆಯಲ್ಲಿ ಮಾತನಾಡಿದ ದೃಶ್ಯ ವೈರಲ್‌...

1998 ಮತ್ತು 2013 ರ ನಡುವೆ ರಾಜಧಾನಿಯಲ್ಲಿ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರಗಳ ಮೂರು ಸತತ ಅವಧಿಯಲ್ಲಿ, ಲವ್ಲಿ ಕ್ಯಾಬಿನೆಟ್‌ನಲ್ಲಿ ಪ್ರಮುಖ ಸಚಿವರಾಗಿದ್ದರು.
ನಂತರ 2015 ರಲ್ಲಿ, ಪಕ್ಷದ ದೆಹಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಲವ್ಲಿ ಅವರಿಗೆ ಸೂಚಿಸಲಾಯಿತು. ಇದು ಅವರು ಕಾಂಗ್ರೆಸ್‌ನಿಂದ ನಿರ್ಗಮಿಸಲು ಕಾರಣವಾಯಿತು. ಕಾಂಗ್ರೆಸ್‌ಗೆ ವಾಪಸ್‌ ಆಗುವ ಮೊದಲು ಅವರು ಒಂಬತ್ತು ತಿಂಗಳ ಕಾಲ ಬಿಜೆಪಿಯಲ್ಲಿದ್ದರು.
ದೆಹಲಿಯಲ್ಲಿ ಎಎಪಿ-ಕಾಂಗ್ರೆಸ್ ಮೈತ್ರಿ
ಪ್ರಮುಖವಾಗಿ, ಕಾಂಗ್ರೆಸ್-ಎಎಪಿ ದೆಹಲಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿವೆ. ಎಎಪಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮೂರು ಕಾಂಗ್ರೆಸ್‌ಗೆ ಹಂಚಿಕೆಯಾಗಿದೆ. ಎಎಪಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ನಾಲ್ಕು ಸ್ಥಾನಗಳೆಂದರೆ ನವದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿ ಕ್ಷೇತ್ರವಾಗಿದೆ. ವಾಯವ್ಯ ದೆಹಲಿ, ಈಶಾನ್ಯ ದೆಹಲಿ ಮತ್ತು ಚಾಂದಿನಿ ಚೌಕ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement