ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ, ಬೇರೆ ಯಾರಿಗೂ ಕೊಟ್ಟಿಲ್ಲ : ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ ಹೇಳಿಕೆ

ಹಾಸನ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ, ಜೆಡಿಎಸ್‌ನ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣರ ಮಾಜಿ ಕಾರು ಚಾಲಕ ವೀಡಿಯೊ ಮೂಲಕ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಾರ್ತಿಕ್ ಅವರು ಅಜ್ಞಾತ ಸ್ಥಳದಿಂದ ವೀಡಿಯೊ ಸಂದೇಶ ಕಳುಹಿಸಿದ್ದು, ‘ನಾನು ಹದಿನೈದು ವರ್ಷದಿಂದ ಪ್ರಜ್ವಲ್‌ ರೇವಣ್ಣ ಹಾಗೂ ಅವರ ಕುಟುಂಬಕ್ಕೆ ಕಾರು ಚಾಲಕನಾಗಿ ಕೆಲಸ ಮಾಡಿದ್ದೇನೆ. ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದೇನೆ. ನನ್ನ ಜಮೀನು ಬರೆಯಿಸಿಕೊಂಡು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದರು. ಹಿಂಸೆ ಕೊಟ್ಟು ಹಲ್ಲೆ ಮಾಡಿದರು. ಆದ್ದರಿಂದ ಕೆಲಸ ಬಿಟ್ಟು ಅವರ ಮನೆಯಿಂದ ಹೊರಬಂದೆ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

ದೇವರಾಜೇಗೌಡ ಅವರು ದೇವೇಗೌಡರ ಕುಟುಂಬದ ವಿರುದ್ಧ ಹೋರಾಟ ಮಾಡುತ್ತಿದ್ದರು. ಬೇರೆ ಯಾರಿಂದಲೂ ನ್ಯಾಯ ಸಿಗುವುದಿಲ್ಲ ಎಂದು ದೇವರಾಜೇಗೌಡ ಬಳಿ ಹೋದೆ, ಯಾವುದೇ ಅಶ್ಲೀಲ ವೀಡಿಯೊ ರಿಲೀಸ್ ಮಾಡಬಾರದು ಎಂದು ನನ್ನ ವಿರುದ್ದ ಪ್ರಜ್ವಲ್‌ ರೇವಣ್ಣ ಸ್ಟೇ ತಂದಿದ್ದಾರೆ. ಆಗ ನಿನ್ನ ಬಳಿ ಇರುವ ವಿಡಿಯೋ, ಫೋಟೋಸ್ ನಾನು ಯಾರಿಗೂ ತೋರಿಸುವುದಿಲ್ಲ ಕೊಡು ಎಂದು ದೇವರಾಜೇಗೌಡ ಕೇಳಿದರು. ಅವರನ್ನು ನಾನು ನಂಬಿ ನನ್ನ ಬಳಿಯಿದ್ದ ವೀಡಿಯೊ ಒಂದು ಕಾಪಿ ಅವರಿಗೆ ಕೊಟ್ಟೆ. ಅವರು ಅದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೋ ಗೊತ್ತಿಲ್ಲ. ದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಿಗೂ ನಾನು ಕೊಟ್ಟಿಲ್ಲ ಎಂದು ಕಾರ್ತಿಕ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸಾಲದ ಹಣ ಮರಳಿ ಕೊಡಲು ತಡವಾಗಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ : ಮನನೊಂದು ರೈತ ಆತ್ಮಹತ್ಯೆ

ಕಾಂಗ್ರೆಸ್‌ನವರಿಗೆ ನಾನು ವೀಡಿಯೊ ಕೊಟ್ಟಿಲ್ಲ. ಕಾಂಗ್ರೆಸ್ಸಿನವರ ಮೇಲೆ ನಂಬಿಕೆ ಇಲ್ಲದೆ ದೇವರಾಜೇಗೌಡರ ಹತ್ತಿರ ಕೊಟ್ಟಿದ್ದೆ. ಪೆನ್‌ಡ್ರೈವ್ ಯಾರು ಹಂಚಿದರೋ ಗೊತ್ತಿಲ್ಲ. ಈಗ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಕಾಂಗ್ರೆನವರಿಗೆ ಕೊಡುವುದಿದ್ದರೆ ದೇವರಾಜೇಗೌಡ ಬಳಿ ಏಕೆ ಹೋಗುತ್ತಿದ್ದೆ. ಎಸ್‌ಐಟಿ ಮುಂದೆ ಹಾಜರಾಗಿ ಎಲ್ಲಾ ಹೇಳಿಕೊಳ್ಳುತ್ತೇನೆ. ನಂತರ ಮಾಧ್ಯಮದ ಮುಂದೆ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ.
ರೇವಣ್ಣ ಮನೆಯಲ್ಲಿ ಏನೆಲ್ಲಾ ನಡೆದಿದೆ, ನಾನು ನೋಡಿದ್ದೇನೆ. ಎಲ್ಲವನ್ನೂ ಎಸ್‌ಐಟಿ ಮುಂದೆ ಹೇಳುತ್ತೇನೆ. ಯಾರಿಗೆ ಅನ್ಯಾಯ ಆಗಿದೆಯೋ ಧೈರ್ಯವಾಗಿ ಮುಂದೆ ಬನ್ನಿ ಎಂದು ಕಾರ್ತಿಕ್ ವಿಡಿಯೊ ಮೂಲಕ ಮನವಿ ಮಾಡಿದ್ದಾರೆ.

 

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement