ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ರಾಜು ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್‌

ಬೆಳಗಾವಿ : ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ ಹಾಗೂ ಕಾಂಗ್ರೆಸ್‌ಗೆ ಮತ ನೀಡದಿದ್ದರೆ ವಿದ್ಯುತ್‌ ಕಡಿತ ಮಾಡುವ ಹೇಳಿಕೆ ನೀಡಿದ ಶಾಸಕ ಭರಮಗೌಡ (ರಾಜು) ಕಾಗೆ ಅವರಿಗೆ ಚಿಕ್ಕೊಡಿ ಜಿಲ್ಲಾ ಚುನಾವಣಾಧಿಕಾರಿ ‘ನೀತಿ ಸಂಹಿತೆ ಉಲ್ಲಂಘನೆ’ ಅಡಿ ಬುಧವಾರ ನೋಟಿಸ್‌ ನೀಡಿದ್ದಾರೆ.
ತಮ್ಮ ಎರಡೂ ಹೇಳಿಕೆಗಳ ಕುರಿತು 24 ಗಂಟೆಯೊಳಗೆ ವಿವರಣೆ ಕೊಡಬೇಕು ಎಂದು ಕಾಗವಾಡ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮೂಲಕ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಚುನಾವಣೆ ಪ್ರಚಾರದ ವೇಳೆ, ‘ಪ್ರಧಾನಿ ನರೇಂದ್ರ ಮೋದಿ ಸತ್ತರೆ ಈ ದೇಶದಲ್ಲಿ ಮುಂದೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ? ಏಕೆ ಮೋದಿ…ಮೋದಿ… ಎಂದು ಕೂಗುತ್ತೀರಿ’ ಎಂದು ಶಾಸಕ ಭರಮಗೌಡ (ರಾಜು) ಕಾಗೆ ವಾಗ್ದಾಳಿ ನಡೆಸಿದ್ದರು.

ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಲೀಡ್ ಕೊಡದಿದ್ದರೆ ವಿದ್ಯುತ್ ಕಟ್ ಮಾಡುವುದಾಗಿ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಭಾಷಣದ ವೇಳೆ ಮತದಾರರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಚುನಾವಣಾ ಆಯೋಗ ನೋಟಿಸ್‌ ನೀಡಿದೆ.
ಕಾಗವಾಡ ತಾಲೂಕು ಜುಗುಳ ಗ್ರಾಮದಲ್ಲಿ ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಕಾಗವಾಡ ಶಾಸಕ ರಾಜು ಕಾಗೆ ಅವರು, ಕಾಂಗ್ರೆಸ್‌ಗೆ ಲೀಡ್ ಕಡಿಮೆ ಕೊಟ್ಟರೆ ಕರೆಂಟ್ ಕೊಡಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಲೀಡ್ ಕೊಟ್ಟಿದ್ದಕ್ಕೆ ಕರೆಂಟ್ ತೆಗೀತಾ ಇದ್ದೇವೆ ಅಷ್ಟೇ. ಮತ್ತೆ ಲೋಕಸಭೆಯಲ್ಲಿ ಲೀಡ್ ಕೊಡಲಿಲ್ಲ ಎಂದರೆ ಕರೆಂಟ್ ಕೊಡುವುದೇ ಇಲ್ಲ, ಸಂಪೂರ್ಣ ಕಟ್ ಮಾಡುತ್ತೇವೆ ಎಂದು ಬೆದರಿಕೆ ಹಾಕುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಈ ಅವರ ಹೇಳಿಕೆಗೆ ಚುನಾವಣಾ ಆಯೋಗ ನೋಟಿಸ್‌ ನೀಡಿದೆ.

ಪ್ರಮುಖ ಸುದ್ದಿ :-   ಈಜಲು ತೆರಳಿದ್ದ ನಾಲ್ವರು ಬಾಲಕರು ನೀರುಪಾಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement