ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ : ಗೃಹ ಸಚಿವ ಡಾ..ಪರಮೇಶ್ವರ

ಬೆಂಗಳೂರು : ಲೈಂಗಿಕ ಕಿರುಕುಳ ಪ್ರಕರಣ ಎದುರಿಸುತ್ತಿರುವ ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಭಾರತಕ್ಕೆ ಕರೆತರಲು ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, ಇಂಟರ್‌ಪೋಲ್‌ ಸಹಾಯ ಪಡೆಯಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಭಾನುವಾರ ಹೇಳಿದ್ದಾರೆ.
ಅಪರಾಧಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಕುರಿತು ಅದರ ಸದಸ್ಯ ರಾಷ್ಟ್ರಗಳಿಂದ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲು ಅಂತಾರಾಷ್ಟ್ರೀಯ ಪೊಲೀಸ್ ಸಹಕಾರ ಸಂಸ್ಥೆಯಿಂದ ಬ್ಲೂ ಕಾರ್ನರ್ ನೋಟಿಸ್ ನೀಡಲಾಗುತ್ತದೆ.
ಪ್ರಜ್ವಲ್‌ ರೇವಣ್ಣ ಅವರ ಆರೋಪಿತ ಲೈಂಗಿಕ ಹಗರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡವು ಅವರನ್ನು ಮರಳಿ ಕರೆತರುವುದು ಹೇಗೆ ಎಂದು ನಿರ್ಧರಿಸುತ್ತದೆ ಎಂದು ಸಚಿವರು ಹೇಳಿದರು.

ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, ಇಂಟರ್ ಪೋಲ್ ಎಲ್ಲ ದೇಶಗಳಿಗೂ ಮಾಹಿತಿ ನೀಡಿ ಅವರ ಪತ್ತೆ ಮಾಡಲಿದೆ ಎಂದು ಪರಮೇಶ್ವರ ಸುದ್ದಿಗಾರರಿಗೆ ತಿಳಿಸಿದರು.
ಪ್ರಕರಣದ ತನಿಖೆಗಾಗಿ ರಚಿಸಲಾದ ಎಸ್‌ಐಟಿಯ ಕಾರ್ಯವನ್ನು ಶ್ಲಾಘಿಸಿದ ಅವರು, ತಂಡವು ತನ್ನ ಕೆಲಸವನ್ನು ಮಾಡುತ್ತಿದೆ ಮತ್ತು ತನಗೆ ಬಂದ ದೂರುಗಳ ಬಗ್ಗೆ ಕಾನೂನು ಪ್ರಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಜ್ವಲ್ ಅವರ ತಂದೆ ಎಚ್‌ಡಿ ರೇವಣ್ಣ ಅವರನ್ನು ಉಲ್ಲೇಖಿಸಿ ‘ಆರೋಪಿಗಳನ್ನು’ ಬಂಧಿಸಲಾಗಿದೆ ಎಂದರು.
ಪ್ರಜ್ವಲ್ ತಂದೆ, ಜೆಡಿಎಸ್ ಶಾಸಕ ರೇವಣ್ಣ ಕೂಡ ಕಿರುಕುಳ ಮತ್ತು ಅಪಹರಣ ಆರೋಪ ಎದುರಿಸುತ್ತಿದ್ದು, ಶನಿವಾರ ಎಸ್‌ಐಟಿ ಅವರನ್ನು ಬಂಧಿಸಿದೆ.

ಪ್ರಮುಖ ಸುದ್ದಿ :-   ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಪುತ್ರ ಪ್ರಜ್ವಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದ ಅಪಹರಣ ಪ್ರಕರಣದಲ್ಲಿ ಎಸ್‌ಐಟಿಯ ಅಧಿಕಾರಿಗಳು ಶನಿವಾರ ರೇವಣ್ಣ ಅವರನ್ನು ಬಂಧಿಸಿದ್ದಾರೆ. ಇಲ್ಲಿನ ನ್ಯಾಯಾಲಯವು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕೂಡಲೇ ಅವರನ್ನು ಬಂಧಿಸಲಾಯಿತು.
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ 33 ವರ್ಷದ ಪ್ರಜ್ವಲ್ ಭಾಗಿಯಾಗಿದ್ದಾರೆ ಎನ್ನಲಾದ ವೀಡಿಯೊ ತುಣುಕುಗಳು ಇತ್ತೀಚಿನ ದಿನಗಳಲ್ಲಿ ಹಾಸನದಲ್ಲಿ ಹರಿದಾಡಲಾರಂಭಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದರ ತನಿಖೆಗೆ ಎಸ್‌ಐಟಿಯನ್ನು ರಚಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement