ದ್ವೇಷ ಭಾಷಣ : ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳದ ಚುನಾವಣಾ ಆಯೋಗ ; ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

ಚೆನ್ನೈ: ಲೋಕಸಭಾ ಚುನಾವಣೆ ವೇಳೆ ದ್ವೇಷ ಭಾಷಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿವರಣೆ ಪಡೆಯುವಂತೆ ಭಾರತ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಕಾಂಗ್ರೆಸ್‌ ಸಮಿತಿ (ಟಿಎನ್‌ಸಿಸಿ) ಮದ್ರಾಸ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಪ್ರಧಾನಿ ಮೋದಿಯವರ ದ್ವೇಷ ಭಾಷಣಗಳ ವಿರುದ್ಧ ಚುನಾವಣಾ ಆಯೋಗಕ್ಕೆ ಹಲವು ದೂರುಗಳನ್ನು ಸಲ್ಲಿಸಿದ್ದರೂ, ನೇರವಾಗಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಕೇಳುವ ಬದಲು ಚುನಾವಣಾ ಆಯೋಗವು ಬಿಜೆಪಿಗೆ ಒಂದು ಶೋಕಾಸ್‌ ನೋಟಿಸ್‌ ನೀಡಿದೆ ಎಂದು ಟಿಎನ್‌ಸಿಸಿ ಅಧ್ಯಕ್ಷ ಕೆ ಸೆಲ್ವಪೆರುಂತಗೈ ಸಲ್ಲಿಸಿರುವ ಅರ್ಜಿ ತಿಳಿಸಿದ್ದಾರೆ.

ಏಪ್ರಿಲ್ 21ರಿಂದ ಅನೇಕ ಚುನಾವಣಾ ಸಭೆಗಳಲ್ಲಿ ಪ್ರಧಾನಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ. ದ್ವೇಷ ಭಾಷಣಗಳಿಗೆ ಸಂಬಂಧಿಸಿದಂತೆ ಖುದ್ದು ಮೋದಿಯೇ ಅಪರಾಧಿಯಾಗಿದ್ದು, ಅವಹೇಳನಕಾರಿ ಮತ್ತು ವಿಭಜನಕಾರಿ ಭಾಷಣಗಳಿಗೆ ಮೋದಿ ಅವರೇ ಏಕಮಾತ್ರ ಜವಾಬ್ದಾರರು. ಚುನಾವಣಾ ಆಯೋಗದ ಈ ಮೃದು ಧೋರಣೆ ತಪ್ಪು ಸಂದೇಶ ನೀಡಲಿದ್ದು ದೇಶದ ಸಂಪೂರ್ಣ ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಹಾನಿಮಾಡುತ್ತದೆ ಎಂದು ಅರ್ಜಿ ತಿಳಿಸಿದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ: ಕೇಜ್ರಿವಾಲ್ ನಿವಾಸದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದ ಪೊಲೀಸರು

2024ರ ಲೋಕಸಭೆ ಚುನಾವಣೆಯನ್ನು ಗೆಲ್ಲಲು ಕೋಮುವಾದದ ಮೂಲಕ ಬಿಜೆಪಿ ವಿಭಜನೆಯ ಪ್ರಚಾರದಲ್ಲಿ ತೊಡಗಿದೆ. ಪ್ರಧಾನಿಮೋದಿ ಮುಸ್ಲಿಮರನ್ನು “ನುಸುಳುಕೋರರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರು” ಎಂದು ಕರೆದಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಬಗ್ಗೆ ಮೋದಿ ತಪ್ಪುದಾರಿಗೆಳೆಯುವ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇದನ್ನು ತಡೆಯಬೇಕು. ಮೇ 1 ರಂದು ಚೆನ್ನೈನಲ್ಲಿರುವ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಈ ಕುರಿತು ಪತ್ರ ಬರೆದಿದ್ದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಹೈಕೋರ್ಟ್‌ಗೆ ಪ್ರಸ್ತುತ ಅರ್ಜಿ ಸಲ್ಲಿಸಲಾಗಿದ್ದು ಮೋದಿ ಅವರಿಂದ ವಿವರಣೆ ಪಡೆಯುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement