ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿದ್ದ ಕೆ.ವಸಂತ ಬಂಗೇರ(79) ಇಂದು, ಬುಧವಾರ (ಏಪ್ರಿಲ್‌  8) ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೇದೆ ಸುಬ್ಬ ಪೂಜಾರಿ ಮತ್ತು ದೇವಕಿ ದಂಪತಿಯ ಪ್ರಥಮ ಪುತ್ರರಾಗಿ 1946ರ ಜನವರಿ 15ರಂದು ಜನಿಸಿದ ಅವರು ಇತ್ತೀಚಿಗೆ ಅನಾರೋಗ್ಯ ಪೀಡಿತರಾಗಿದ್ದರು. ಚಿಕಿತ್ಸೆ ಫಲಿಸದೆ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಪತ್ನಿ ಸುಜಿತಾ ವಿ ಬಂಗೇರ, ಪುತ್ರಿಯರಾದ ಪ್ರೀತಿತಾ ಹಾಗೂ ಬಿನುತಾ, ಅಳಿಯಂದಿರಾದ ಧರ್ಮ ವಿಜೇತ ಹಾಗೂ ಸಂಜೀವ ಕಣೇಕಲ್ ಹಾಗೂ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

ಮೇ 9ರಂದು ಅವರ ಪಾರ್ಥಿವ ಶರೀರವನ್ನು ಬೆಳ್ತಂಗಡಿಗೆ ತರುವ ನಿರೀಕ್ಷೆ ಇದೆ. ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೆ. ವಸಂತ ಬಂಗೇರ ಅವರು ಜಿಲ್ಲೆಯ ಬಿಜೆಪಿಯ ಮೊದಲ ಇಬ್ಬರು ಶಾಸಕರಲ್ಲಿ ಒಬ್ಬರು ಎನ್ನುವುದು ವಿಶೇಷ. ವಸಂತ ಬಂಗೇರ ಅವರು ಬಿಜೆಪಿ, ಜನತಾದಳ ಹಾಗೂ ಕಾಂಗ್ರೆಸ್ ಮೂರೂ ಪಕ್ಷಗಳಿಂದ ಸ್ಪರ್ಧಿಸಿ ಗೆದ್ದು ಶಾಸಕರಾದ ಹೆಗ್ಗಳಿಕೆ ಹೊಂದಿದ್ದಾರೆ. 1983 ಮತ್ತು 1985ರಲ್ಲಿ ಬಿಜೆಪಿಯಿಂದ, 1994ರಲ್ಲಿ ಜನತಾದಳದಿಂದ, 2008 ಮತ್ತು 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು.

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement