ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ ; 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸೇರಿ ಮೂವರು ಅರೆಸ್ಟ್

ಮಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಮುಸ್ತಾಫಾ ಪೈಚಾರು ಎಂಬವನನ್ನು ರಾಷ್ಟ್ರೀಯ ತನಿಖಾದಳ (ಎನ್ಐಎ) ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮುಸ್ತಫಾ ಪೈಚಾರ್ ಬಂಧಿತ ಆರೋಪಿ. ಇಂದು, ಶುಕ್ರವಾರ ಬೆಳಗ್ಗೆ ಸಕಲೇಶಪುರದಲ್ಲಿ ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (NIA) ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ 2022ರ ಜುಲೈ 26ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ ನೆಟ್ಟಾರು ಅವರನ್ನು ಭೀಕರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮುಸ್ತಾಫಾ ಪೈಚಾರು ತಲೆಮರೆಸಿಕೊಂಡಿದ್ದ. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಈತನನ್ನು ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಬಂಧಿಸಿದ್ದು ಈತನಿಗೆ ಆಶ್ರಯ ನೀಡಿದ ಇಬ್ಬರನ್ನು ಸಹ ವಶಕ್ಕೆ ಪಡೆದುಕೊಂಡಿದ್ದಾರೆ.

ಆನೆಮಹಲ್‌ನ ಸಿರಾಜ್ ಬಳಿ ಕೆಲಸಕ್ಕೆ ಸೇರಿದ್ದ ಮುಸ್ತಾಫಾ ಪೈಚಾರ್ ಹಾಗೂ ಇಲಿಯಾಸ್ ಎಂಬವರನ್ನು ಎನ್‌ಐಎ ಬಂಧಿಸಿದ್ದು, ಈ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಸಿರಾಜ್ ನನ್ನು ವಶಕ್ಕೆ ಪಡೆದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮುಸ್ತಾಫ್ ಪೈಚಾರ್ (43) ನಾಲ್ಕನೇ ಆರೋಪಿಯಾಗಿದ್ದ.ಮೊಹಮ್ಮದ್‌ ಮುಸ್ತಾಫ್‌ ಪೈಚಾರ್‌ ತಲೆಮರೆಸಿಕೊಂಡಿದ್ದ. ಇವನ ಬಗ್ಗೆ ಎನ್ ಐ ಎ ಔಟ್ ಲುಕ್ ನೋಟಿಸ್ ಹೊರಡಿಸಿ, ಇವನ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ ಘೋಷಿಸಿತ್ತು. ಈತನೂ ಸೇರಿದಂತೆ ಉಮರ್‌ ಫಾರೂಕ್‌, ತುಫೈಲ್‌, ಅಬೂಬಕ್ಕರ್‌ ಸಿದ್ದಿಕ್‌ ಪತ್ತೆಗೆ ಒಟ್ಟು 14 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.ಇವರಲ್ಲಿ ಮಡಿಕೇರಿ ನಿವಾಸಿ ತುಫೈಲ್‌ ನನ್ನು ಈ ಹಿಂದೆ ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.
2022ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ ನೆಟ್ಟಾರು ಅವರನ್ನು, ಅವರ ಕೋಳಿ ಅಂಗಡಿ ಬಳಿಯೇ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ

ಇದಾದ ಬಳಿಕ ದುಷ್ಕರ್ಮಿಗಳು ವಿವಿಧ ಕಡೆಗಳಿಗೆ ಪರಾರಿಯಾಗಿದ್ದರು. ಆರಂಭದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಕಳೆದ ವರ್ಷ ಜನವರಿಯಲ್ಲಿ ಎನ್‌ಐಎ 20 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಎನ್‌ಐಎ ಚಾರ್ಜ್‌ಶೀಟ್‌ನ ಪ್ರಕಾರ, ಒಂದು ಸಮುದಾಯದ ಸದಸ್ಯರಲ್ಲಿ ಭಯವನ್ನು ಸೃಷ್ಟಿಸಲು ಮತ್ತು ಸಮಾಜದಲ್ಲಿ ಕೋಮು ದ್ವೇಷ, ಅಶಾಂತಿಯನ್ನು ಸೃಷ್ಟಿಸಲು ಪಿಎಫ್‌ಐನ ಕಾರ್ಯಸೂಚಿಯ ಭಾಗವಾಗಿ ಈ ಹತ್ಯೆ ಮಾಡಲಾಗಿದೆ ಎನ್ನಲಾಗಿತ್ತು.

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement