ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ತಾವು ಬರೆದ ತಾಯ್ತನದ ಪುಸ್ತಕದಲ್ಲಿ ಬೈಬಲ್ ಪದ ಬಳಸಿದ್ದಕ್ಕೆ ಅವರಿಗೆ ಮಧ್ಯಪ್ರದೇಶ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.
ಗರ್ಭಾವಸ್ಥೆ ಹಾಗೂ ತಾಯ್ತನಕ್ಕೆ ಸಂಬಂಧಿಸಿದಂತೆ ನಟಿ ಕರೀನಾ ಪುಸ್ತಕ ಬರೆದಿದ್ದು, ಇದಕ್ಕೆ ‘ಕರೀನಾ ಕಪೂರ್ ಖಾನ್ಸ್ ಪ್ರಗ್ನೆನ್ಸಿ ಬೈಬಲ್ ಎಂದು ಹೆಸರಿಟ್ಟಿದ್ದರು. ಆದರೆ ಹೀಗೆ ಬೈಬಲ್ ಪದ ಬಳಸಿ ತಮ್ಮ ಪುಸ್ತಕಕ್ಕೆ ಹೆಸರಿಟ್ಟಿರುವುದಕ್ಕೆ ವಕೀಲರೊಬ್ಬರು ಅಸಮಾಧಾನ ವ್ಯಕ್ತಪಡಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಮಧ್ಯ ಪ್ರದೇಶದ ಹೈಕೋರ್ಟ್ ನಟಿ ಕರೀನಾ ಅವರಿಗೆ ನೊಟೀಸ್ ಜಾರಿ ಮಾಡಿದೆ.
ಕರೀನಾ ಅವರ ವಿರುದ್ಧ ವಕೀಲ ಕ್ರಿಸ್ಟೋಫರ್ ಆಂಥೋನಿ ಅವರು ಹೈಕೋರ್ಟ್‌ಗೆ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ನ್ಯಾ. ಗುರುಪಾಲ್ ಸಿಂಗ್ ಅಹ್ಲುವಾಲಿಯಾ ಅವರಿದ್ದ ಏಕಸದಸ್ಯ ಪೀಠ ನೋಟಿಸ್ ಜಾರಿಗೊಳಿಸಿದೆ.
ʼಕರೀನಾ ಕಪೂರ್ ಖಾನ್ಸ್ ಪ್ರೆಗ್ನೆನ್ಸಿ ಬೈಬಲ್ʼ ಕೃತಿಯಲ್ಲಿ ಬೈಬಲ್ ಎಂಬ ಪದ ಬಳಸಿ ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಆರೋಪಕ್ಕೆ ಸಂಬಂಧಿಸಿದಂತೆ ಕರೀನಾ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಅರ್ಜಿದಾರರು ಕೋದ್ದಾರೆ. ಕರೀನಾ ಅವರಲ್ಲದೆ ಅಮೆಜಾನ್ ಆನ್‌ಲೈನ್ ಶಾಪಿಂಗ್, ಜಗ್ಗರ್‌ನಾಟ್ ಬುಕ್ಸ್ ಹಾಗೂ ಕೃತಿಯ ಸಹ ಲೇಖಕರನ್ನು ಕೂಡ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ನಟಿಯ ಗರ್ಭಧಾರಣೆಯೊಂದಿಗೆ ಪವಿತ್ರ ಪಸ್ತಕ ಬೈಬಲನ್ನು ತುಲನೆ ಮಾಡಿರುವುದು ಕ್ರೈಸ್ತ ಸಮುದಾಯದ ಭಾವನೆಗಳಿಗೆ ನೋವುಂಟು ಮಡಿದೆ ಎಂದು ಆರೋಪಿಸಿ ಆಂಥೋನಿ ಅವರು ಈ ಹಿಂದೆ ಜಬಲ್‌ಪುರದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದರು. ಆದರೆ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದರಿಂದ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
‘ಬೈಬಲ್’ ಪದದ ಬಳಕೆ ಕ್ರೈಸ್ತ ಸಮುದಾಯದ ಭಾವನೆಗಳನ್ನು ಹೇಗೆ ನೋಯಿಸುತ್ತದೆ ಎಂಬುದನ್ನು ಸಾಬೀತುಪಡಿಸಲು ದೂರುದಾರರು ವಿಫಲರಾಗಿದ್ದಾರೆ ಎಂಬ ಕಾರಣಕ್ಕಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕೂಡ ಮನವಿ ತಿರಸ್ಕರಿಸಿತ್ತು. ಬಳಿಕ ಹೆಚ್ಚುವರಿ ನ್ಯಾಯಾಲಯ ಕೂಡ ಪರಿಹಾರ ನೀಡಲು ನಿರಾಕರಿಸಿದ ನಂತರ ಆಂಥೋನಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮಧ್ಯಪ್ರದೇಶ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಾಧೀಶರಾದ ಗುರುಪಾಲ್ ಸಿಂಗ್ ಅಹ್ಲುವಾಲಿಯಾ ಅವರು ಕರೀನಾ ಕಪೂರ್ ಹಾಗೂ ಪುಸ್ತಕದ ಮಾರಾಟಗಾರರಿಗೆ ನೊಟೀಸ್ ಜಾರಿ ಮಾಡಿದ್ದು, ಏಕೆ ತಮ್ಮ ಪುಸ್ತಕದ ಹೆಸರಿಗೆ ಬೈಬಲ್ ಎಂಬ ಪದವನ್ನು ಸೇರಿಸಿದ್ದೀರಿ ಎಂಬ ಬಗ್ಗೆ ಉತ್ತರಿಸುವಂತೆ ಸೂಚಿಸಿದ್ದಾರೆ. ವ
ನಿಮ್ಮ ಕಾಮೆಂಟ್ ಬರೆಯಿರಿ