ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

ಹಾಸನ : ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೊ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗ ಪ್ರಕರಣವೊಂದರಲ್ಲಿ ಪೊಲೀಸರ ವಶದಲ್ಲಿರುವ ವಕೀಲ ದೇವರಾಜೇ ಗೌಡ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಶ್ಲೀಲ ವೀಡಿಯೊಗಳಿರುವ ಪೆನ್‌‌ಡ್ರೈವ್ ಹಂಚಿಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಸೂಚನೆಯಂತೆ ಮಾಡಿದ್ದೇನೆ ಎಂದು ಹೇಳಿದರೆ 100 ಕೋಟಿ ರೂಪಾಯಿ ಕೊಡುವುದಾಗಿ ಡಿ.ಕೆ. ಶಿವಕುಮಾರ್ ಆಫರ್ ನೀಡಿದ್ದರು ಎಂದು ದೇವರಾಜೇ ಗೌಡ ಆರೋಪಿಸಿದ್ದಾರೆ.
ಪೊಲೀಸರ ವಶದಲ್ಲಿರುವ ದೇವೇರಾಜೇಗೌಡ ಮಾಧ್ಯಮಗಳಿಗೆ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪೆನ್‌ಡ್ರೈವ್ ಕುರಿತು ಡಿಕೆ ಶಿವಕುಮಾರ ನನ್ನನ್ನು ಕರೆಸಿ ಮಾತನಾಡಿದ್ದಾರೆ. ಕಾರ್ತಿಕ್‌ನಿಂದ ಪೆನ್‌ಡ್ರೈವ್ ತರಿಸಿಕೊಂಡು ಎಲ್ಲಾ ಮಾಹಿತಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಪ್ರಜ್ವಲ್‌  ರೇವಣ್ಣ ಕುರಿತಾದ ಪೆನ್‌ಡ್ರೈವ್ ಹಂಚಲು ಕುಮಾರಸ್ವಾಮಿಯೇ ಹೇಳಿದ್ದಾರೆ ಎಂದು ಹೇಳಲು ನನಗೆ ಶಿವಕುಮಾರ ಸೂಚಿಸಿದ್ದರು. ಹೀಗೆ ಹೇಳಿದರೆ 100 ಕೋಟಿ ರೂಪಾಯಿ ಕೊಡುವುದಾಗಿ ಆಫರ್ ನೀಡಿದ್ದರು. ಏನೇ ಸಮಸ್ಯೆ ಎದುರಾದರೂ ನಿನ್ನನ್ನು ರಕ್ಷಣೆ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ ಭರವಸೆ ನೀಡಿದ್ದರು ಎಂದು ದೇವರಾಜೆ ಗೌಡ ಹೇಳಿದ್ದಾರೆ.
ಪೆನ್‌ಡ್ರೈವ್ ರೆಡಿ ಮಾಡಿಸಿದ್ದು ಡಿಕೆ ಶಿವಕುಮಾರ. ಈ ಪೆನ್‌ಡ್ರೈವ್ ಪ್ರಕರಣಕ್ಕೆ ನಾಲ್ವರು ಸಚಿವರನ್ನು ನೇಮಕ ಮಾಡಿದ್ದರು. ಚೆಲುವರಾಯ ಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ ಖರ್ಗೆ ಹಾಗೂ ಮತ್ತೊಬ್ಬ ಸಚಿವರ ತಂಡ ರಚಿಸಿದರು. ಬಳಿಕ ನಿರಂತರವಾಗಿ ನನ್ನ ಮೇಲೆ ಒತ್ತಡ ತರುವ ಪ್ರಯತ್ನವನ್ನು ಶಿವಕುಮಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ಶಾಂತ್ ತಿಮ್ಮಯ್ಯ ವಜಾಗೊಳಿಸಿದ ರಾಜ್ಯ ಸರ್ಕಾರ

ಪ್ರಧಾನಿ ಮೋದಿ, ಬಿಜೆಪಿ ಹಾಗೂ ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ಈ ಪ್ರಕರಣವನ್ನು ಮಾಡಿದ್ದಾರೆ. 100 ಕೋಟಿ ರೂಪಾಯಿ ಆಫರ್ ನೀಡಿದ್ದರು. 5 ಕೋಟಿ ರೂಪಾಯಿ ಅಡ್ವಾನ್ಸ್ ಮೊತ್ತವನ್ನು ಬೌರಿಂಗ್ ಕ್ಲಬ್‌ನ 110 ರೂಂ ನಂಬರ್‌ಗೆ ಕಳುಹಿಸಿದ್ದರು. ಚೆನ್ನರಾಯಪಟ್ಟಣದ ಗೋಪಾಲಸ್ವಾಮಿಯನ್ನು ಸಂಧಾನಕ್ಕೆ ಕಳುಹಿಸಿದ್ದರು. ಗೋಪಾಲಸ್ವಾಮಿ ಬಳಿ 5 ಕೋಟಿ ರೂಪಾಯಿ ನಗದು ಕೊಟ್ಟು ಕಳುಹಿಸಿದ್ದರು. ನಾಯಕ ಶಿವರಾಮೇ ಗೌಡ ಮೂಲಕ ನನಗೆ 100 ಕೋಟಿ ರೂಪಾಯಿ ಆಫರ್ ನೀಡಲಾಗಿತ್ತು ಎಂದು ದೇವೇರಾಜೆ ಗೌಡ ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement