ಬೆಂಗಳೂರು ರೇವ್ ಪಾರ್ಟಿ ಪ್ರಕರಣ: ತೆಲುಗು ನಟಿ ಸೇರಿ 86 ಮಂದಿ ಡ್ರಗ್ಸ್ ಸೇವನೆ ದೃಢ

ಬೆಂಗಳೂರು:  ಬೆಂಗಳೂರು ಹೊರ ವಲಯದ ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದವರ ರಕ್ತದ ಮಾದರಿಗಳ ಫಲಿತಾಂಶ ಬಂದಿದ್ದು, ತೆಲುಗು ಚಿತ್ರರಂಗದ ನಟಿ ಸೇರಿದಂತೆ 86 ಮಂದಿ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ಗುರುವಾರ ಪೊಲೀಸ್ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಜನ್ಮದಿನದ ಪಾರ್ಟಿ ನೆಪದಲ್ಲಿ ಆಯೋಜಿಸಲಾಗಿದ್ದ ರೇವ್ ಪಾರ್ಟಿಯಲ್ಲಿ ಒಟ್ಟು 103 ಮಂದಿ ಪಾಲ್ಗೊಂಡಿದ್ದರು. ಭಾಗವಹಿಸಿದವರಲ್ಲಿ 73 ಪುರುಷರು ಮತ್ತು 30 ಮಹಿಳೆಯರು ಸೇರಿದ್ದಾರೆ.
ಮೇ 19 ರಂದು ಬೆಳ್ಳಂಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ದಾಳಿ ನಡೆಸಿದ ಪೊಲೀಸರು 1.5 ಕೋಟಿ ಮೌಲ್ಯದ ಎಂಡಿಎಂಎ (Ecstacy) ಮಾತ್ರೆಗಳು, ಹೈಡ್ರೋ ಗಾಂಜಾ, ಕೊಕೇನ್ ಮೊದಲಾದವುಗಳನ್ನು ವಶಕ್ಕೆ ಪಡೆದಿದ್ದರು.

ದಾಳಿಯ ನಂತರ, ಪೊಲೀಸರು ಪಾಲ್ಗೊಂಡವರ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದರು. ಇದರಲ್ಲಿ 59 ಪುರುಷರು ಮತ್ತು 27 ಮಹಿಳೆಯರು ಮಾದಕ ದ್ರವ್ಯ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿದ್ದು, ಅವರು ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ ಎನ್ನಲಾಗಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್ ಹೌಸ್ ನಲ್ಲಿ ಪಾರ್ಟಿ ಭಾನುವಾರ ಸಂಜೆ ಐದು ಗಂಟೆಯಿಂದ ಆರಂಭವಾಗಿದ್ದು ಸೋಮವಾರ ಬೆಳಗಿನ ಜಾವದವರೆಗೂ ಮುಂದುವರಿದಿತ್ತು. ಪಾರ್ಟಿಯಲ್ಲಿ 110ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಐದು ಜನ ಈ ಇವೆಂಟ್ ಆರ್ಗನೈಸ್ ಮಾಡಿದ್ದರು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಈ ರೇವ್ ಪಾರ್ಟಿ ಪ್ರಕರಣದ​ ತನಿಖೆಯನ್ನು ಅಧಿಕೃತವಾಗಿ ಸಿಸಿಬಿಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ಡಿಜಿ ಅಂಡ್ ಐಜಿಪಿ ಅಲೋಕ್ ಮೋಹನ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಸದ್ಯ ಸಿಸಿಬಿ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇನ್ಸ್‌ಪೆಕ್ಟರ್ ಲಕ್ಷ್ಮೀ ಪ್ರಸಾದ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಏರ್ ಇಂಡಿಯಾ ವಿಮಾನದಲ್ಲಿ 7 ಮಂದಿ ಅಸ್ವಸ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement