ನವದೆಹಲಿ: ಪೆನ್‌ಡ್ರೈವ್ ಪ್ರಕರಣದ ಬಳಿಕ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿದೇಶಾಂಗ ಸಚಿವಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ನಿಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಯಾಕೆ ರದ್ದು ಮಾಡಬಾರದು ಎಂಬುದಕ್ಕೆ ಉತ್ತರ ನೀಡುವಂತೆ ಅದು ಸೂಚಿಸಿದೆ. ವಿದೇಶಾಂಗ ಸಚಿವಾಲಯ ಶುಕ್ರವಾರ ಪ್ರಜ್ವಲ್ ರೇವಣ್ಣ ಅವರಿಗೆ ಜಾರಿ ಮಾಡಿದ ಶೋಕಾಸ್ ನೋಟಿಸ್ ನಲ್ಲಿ ವಿದೇಶಕ್ಕೆ ತೆರಳಲು ಕಾರಣವೇನು? ಆರೋಪದ ಬಗ್ಗೆ ಉತ್ತರವೇನು..? ತನಿಖೆಗೆ ಯಾವಾಗ ಹಾಜರಾಗುತ್ತೀರಿ? ಮತ್ತು ಪಾಸ್‌ಪೋರ್ಟ್ ರದ್ದುಗೊಳಿಸುವುದರ ಬಗ್ಗೆ ಬಗ್ಗೆ ಉತ್ತರ ನೀಡಬೇಕು. ಈ ಬಗ್ಗೆ ವಿವರವಾದ ಮಾಹಿತಿಯನ್ನು ನಿರ್ದಿಷ್ಟ ಅವಧಿಯಲ್ಲಿ ನೀಡಬೇಕು ಎಂದು ವಿದೇಶಾಂಗ ಸಚಿವಾಲಯ ನೋಟಿಸ್‌ನಲ್ಲಿ ಸೂಚಿಸಿದೆ.
ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಬೇಕು ಎಂದು ಕೋರಿ ಪ್ರಕರಣ ತನಿಖೆ ನಡೆಸುತ್ತಿರುವ ಎಸ್ಐಟಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸೆರ್ಕಾರಕ್ಕೆ ಪತ್ರ ಬರೆದ ನಂತರ ವಿದೇಶಾಂಗ ಸಚಿವಾಲಯ, ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇದರಿಂದ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಹಂತದ ಸಂಕಷ್ಟ ಶುರುವಾದಂತಾಗಿದೆ.
ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರು ಏಪ್ರಿಲ್ 26ರಂದು ದೇಶ ಬಿಟ್ಟು ಜರ್ಮನಿಗೆ ಹೋಗಿದ್ದಾರೆ. ಯಾವುದೇ ನೋಟಿಸ್ ಜಾರಿ ಮಾಡಿದರೂ ಸಹ ಪ್ರಜ್ವಲ್ ರೇವಣ್ಣ ವಾಪಸಾಗಿಲ್ಲ. ಹೀಗಾಗಿ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ