ಹೋಟೆಲ್ ಉದ್ಯಮಿ ಕೊಲೆ ಪ್ರಕರಣ : ಭೂಗತ ಪಾತಕಿ ಚೋಟಾ ರಾಜನ್‌ ಗೆ ಜೀವಾವಧಿ ಶಿಕ್ಷೆ

ಮುಂಬೈ : 2001ರಲ್ಲಿ ನಡೆದ ಹೋಟೆಲ್ ಉದ್ಯಮಿ ಜಯ ಶೆಟ್ಟಿ ಅವರ ಕೊಲೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್‌ ಚೋಟಾ ರಾಜನ್‌ಗೆ ವಿಶೇಷ ನ್ಯಾಯಾಲಯ ಗುರುವಾರ (ಮೇ 30) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಎ.ಎಂ .ಪಾಟೀಲ ಅವರು, ಚೋಟಾ ರಾಜನ್ ಅಪರಾಧಿ ಎಂದು ತೀರ್ಪು ನೀಡಿದ್ದಾರೆ.
ಜಯ ಶೆಟ್ಟಿ ದಕ್ಷಿಣ ಮುಂಬೈನ ಗ್ರಾಂಟ್ ರೋಡ್ ಪ್ರದೇಶದ ಪ್ರಸಿದ್ಧ ಗೋಲ್ಡನ್ ಕ್ರೌನ್ ಹೊಟೇಲ್‌ ಮತ್ತು ಬಾರ್‌ ಮಾಲೀಕರಾಗಿದ್ದರು. 2001ರ ಮೇ 4ರಂದು ಅವರನ್ನು ಹೊಟೇಲ್‌ನ ಮೊದಲ ಮಹಡಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹೊಟೇಲ್ ಮ್ಯಾನೇಜರ್‌ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಜಯ ಶೆಟ್ಟಿ ಅವರಿಂದ ಸುಲಿಗೆ ಮಾಡಲು ರಾಜನ್ ಗ್ಯಾಂಗ್‌ ಹಣ ನೀಡದ್ದಕ್ಕೆ ಶೆಟ್ಟಿ ಅವರನ್ನು ಕೊಲೆ ಮಾಡಿದೆ ಎಂಬುದು ತನಿಖೆಯಿಂದ ತಿಳಿದುಬಂದಿತ್ತು.

ಸುಲಿಗೆ ಮತ್ತು ಸಂಬಂಧಿತ ಕೃತ್ಯಗಳ ಸಂಬಂಧ ರಾಜನ್ ವಿರುದ್ಧ ಎಂಸಿಒಸಿಎ ಅಡಿಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಶೆಟ್ಟಿ ಪ್ರಕರಣವನ್ನೂ ಅದೇ ಕಾಯ್ದೆ ಅಡಿ ಸೇರ್ಪಡೆ ಮಾಡಲಾಗಿತ್ತು. ಪ್ರಕರಣದ ಹಿಂದಿನ ವಿಚಾರಣೆಗಳ ಸಂದರ್ಭ ಇನ್ನೂ ಇಬ್ಬರನ್ನು ಅಪರಾಧಿಗಳೆಂದು ತೀರ್ಪು ನೀಡಲಾಗಿದ್ದು, ಸಾಕ್ಷ್ಯಗಳ ಕೊರತೆಯಿಂದ ಮತ್ತೊಬ್ಬನನ್ನು ಖುಲಾಸೆಗೊಳಿಸಲಾಗಿದೆ. ಜೂನ್ 11, 2011 ರಂದು ಪತ್ರಕರ್ತ ಜೆ. ಡೇ ಅವರನ್ನು ಹಗಲು ಹೊತ್ತಿನಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 2018 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ ನಂತರದಲ್ಲಿ ಮುಂಬೈನಲ್ಲಿ ಛೋಟಾ ರಾಜನ್‌ಗೆ ಇದು ಎರಡನೇ ಜೀವಾವಧಿ ಶಿಕ್ಷೆಯಾಗಿದೆ. ಆತ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ.

ಪ್ರಮುಖ ಸುದ್ದಿ :-   ಭಾರಿ ಮಳೆ; ಕದ್ರಾ ಜಲಾಶಯದಿಂದ ನೀರು ಬಿಡುಗಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement