ಬೆಂಗಳೂರಿನಲ್ಲಿ 133 ವರ್ಷಗಳ ಬಳಿಕ ಸುರಿದ ದಾಖಲೆ ಮಳೆ..!

ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ 11.1 ಸೆಂಮೀ ಮಳೆಯಾಗಿದ್ದು, ಜೂನ್‌ ತಿಂಗಳಲ್ಲಿ ಒಂದೇ ದಿನ ಸುರಿದ ಈ ಭಾರೀ ಮಳೆ 133 ವರ್ಷಗಳ ದಾಖಲೆಯನ್ನು ಮುರಿದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 2 ರಂದು ಸರಿದ ಮಳೆ ಕಳೆದ 133 ವರ್ಷಗಳಲ್ಲಿ ಜೂನ್‌ನಲ್ಲಿ ಒಂದೇ ದಿನದಲ್ಲಿ ಸುರಿದ ಅತಿ ಹೆಚ್ಚು ಮಳೆಯಾಗಿದೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ(IMD)ಯ ವಿಜ್ಞಾನಿ ಎನ್ ಪುವಿಯರಸನ್ ತಿಳಿಸಿದ್ದಾರೆ. 1891, ಜೂನ್ 16 ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿತ್ತು ಎಂದು ಅವರು ಹೇಳಿದ್ದಾರೆ.
ಜೂನ್ 1 ಮತ್ತು ಜೂನ್ 2 ರಂದು ಎರಡು ದಿನದಲ್ಲಿ 14.07 ಸೆಂಮೀ ಮಳೆಯಾಗಿದೆ. ಇದು ಜೂನ್ ತಿಂಗಳ ಸರಾಸರಿಯನ್ನು ಮೀರಿಸಿದೆ ಎಂದು ಅವರು ಹೇಳಿದ್ದಾರೆ.

ಭಾರಿ ಮಳೆಯಿಂದ ಬೆಂಗಳೂರಿನ ಬಹುತೇಕ ಪ್ರತಿ ಪ್ರದೇಶದ ರಸ್ತೆಗಳಲ್ಲಿ ನೂರಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಭಾನುವಾರ ರಾತ್ರಿ ಟ್ರಿನಿಟಿ ನಮ್ಮ ಮೆಟ್ರೊ (Namma Metro) ಹಳಿ ಮೇಲೆ ಮರ ಬಿದ್ದು ಸಂಚಾರ ಸ್ಥಗಿತವಾಗಿತ್ತು.
ನೈಋತ್ಯ ಮುಂಗಾರು ಕರ್ನಾಟಕದಲ್ಲಿ ಮತ್ತಷ್ಟು ಚುರುಕಾಗಲಿದ್ದು, ಜೂನ್ 5 ರವರೆಗೆ ಕೆಲವು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, ಉತ್ತರ ಒಳನಾಡಿನಲ್ಲಿ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ವಿಜಯಪುರ ಹಾಗೂ ಬಳ್ಳಾರಿ, ಬೆಂಗಳೂರು(ಗ್ರಾಮೀಣ ಮತ್ತು ನಗರ), ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ಹಾಸನ, ಮೈಸೂರು, ತುಮಕೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಸಾಗರ : ಶಾಲೆಯಲ್ಲಿ ಹೃದಯಾಘಾತದಿಂದ 1ನೇ ತರಗತಿ ವಿದ್ಯಾರ್ಥಿ ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement