ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಜೂನ್ 9 ರಂದು ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಹಾಗೂ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಿಡಿಪಿ ನೇತೃತ್ವದ ಮೈತ್ರಿಕೂಟವು 175 ವಿಧಾನಸಭಾ ಕ್ಷೇತ್ರಗಳ ಪೈಕಿ 158 ಕ್ಷೇತ್ರಗಳಲ್ಲಿ ಸ್ಪಷ್ಟ ಮುನ್ನಡೆಯೊಂದಿಗೆ ಪ್ರಚಂಡ ಗೆಲುವಿನತ್ತ ಸಾಗಿದೆ. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದಲ್ಲಿ ಮತ್ತೊಮ್ಮೆ ಆಡಳಿತ ನಡೆಸಲು ಸಜ್ಜಾಗಿದ್ದಾರೆ.
ಎನ್ಡಿಎ ಅಂಗಪಕ್ಷವಾದ ತೆಲುಗು ದೇಶಂ ಪಕ್ಷವು 129 ಸ್ಥಾನಗಳನ್ನು ಗೆದ್ದಿದೆ ಹಾಗೂ 6ರಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ವಿಧಾನಸಭೆ ಚುನಾವಣೆಗಿಂತ 108 ಸ್ಥಾನ ಹೆಚ್ಚು ಗಳಿಸಿದೆ. ಜನಸೇನಾ ಪಕ್ಷವು 21 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯು 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ನೇತೃತ್ವದ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷವು 11 ಸ್ಥಾನಗಳಲ್ಲಿ ಗೆದ್ದಿದೆ ಅಥವಾ ಮುನ್ನಡೆ ಸಾಧಿಸಿದೆ.
74 ವರ್ಷದ ನಾಯ್ಡು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ಅವರು 1995 ರಿಂದ 2004 ರವರೆಗೆ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
ಟಿಡಿಪಿ ಮುಖ್ಯಸ್ಥರು 2014 ರಲ್ಲಿ ವಿಭಜನೆಯ ನಂತರ ವಿಭಜಿತ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿಯಾದರು. 2019 ರಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕೈಯಲ್ಲಿ ಅವರ ಪಕ್ಷವು ಹೀನಾಯ ಸೋಲನ್ನು ಅನುಭವಿಸಿತ್ತು. ನಾ ನಟ-ರಾಜಕಾರಣಿ ಪವನ್ ಕಲ್ಯಾಣ ಅವರ ಜನಸೇನಾ ಪಕ್ಷ (ಜೆಎಸ್ಪಿ) ಮತ್ತು ಬಿಜೆಪಿಯೊಂದಿಗಿನ ಅವರ ಮೈತ್ರಿಯು ಗೇಮ್ ಚೇಂಜರ್ ಆಗಿದೆ.
131 ಕ್ಷೇತ್ರಗಳಲ್ಲಿ ಸ್ಪಷ್ಟ ಮುನ್ನಡೆಯೊಂದಿಗೆ ಟಿಡಿಪಿ ತನ್ನದೇ ಆದ ಬಹುಮತವನ್ನು ಪಡೆದುಕೊಂಡಿದೆ. 1989 ರಿಂದ ಅವರು ಪ್ರತಿನಿಧಿಸುತ್ತಿರುವ ಕುಪ್ಪಂ ಕ್ಷೇತ್ರದಲ್ಲಿ ನಾಯ್ಡು ಗೆಲುವು ಸಾಧಿಸಿದ್ದಾರೆ. ನಾಯ್ಡು ಅವರ ಪುತ್ರ ಹಾಗೂ ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ ಕೂಡ ಮಂಗಳಗಿರಿ ಕ್ಷೇತ್ರದಲ್ಲಿ ಮುಂದಿದ್ದಾರೆ. ಲೋಕೇಶ ಅವರು ಹಿಂದಿನ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸೋಲು ಅನುಭವಿಸಿದ್ದರು.
25 ಲೋಕಸಭಾ ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳಲ್ಲಿ ಟಿಡಿಪಿ ಕೂಡ ಮುನ್ನಡೆ ಸಾಧಿಸಿದೆ. ತ್ರಿಪಕ್ಷೀಯ ಮೈತ್ರಿಕೂಟ 21 ಸ್ಥಾನಗಳಲ್ಲಿ ಮುಂದಿದೆ. 2019 ರಲ್ಲಿ ಟಿಡಿಪಿ ಕೇವಲ 23 ವಿಧಾನಸಭೆ ಮತ್ತು ಮೂರು ಲೋಕಸಭೆ ಸ್ಥಾನಗಳನ್ನು ಗೆದ್ದಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ