ಬಿಜೆಪಿ ವಿರುದ್ಧ ಶೇ.40 ಕಮಿಷನ್‌ ಆರೋಪ: ವಿಶೇಷ ನ್ಯಾಯಾಲಯದ ಮುಂದೆ ರಾಹುಲ್‌ ಗಾಂಧಿ ಇಂದು ಹಾಜರು

ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಶೇ.40 ಕಮಿಷನ್‌ ಆರೋಪ ಮಾಡಿದ್ದ ಸಂಬಂಧ ತಮ್ಮ ವಿರುದ್ಧ ಹೂಡಲಾಗಿರುವ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಶುಕ್ರವಾರ (ಜೂನ್‌ 7ಕ್ಕೆ) ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ಅವರ ಮುಂದೆ ಖುದ್ದಾಗಿ ಹಾಜರಾಗಲಿದ್ದಾರೆ.
ಬಿಜೆಪಿ ವಿಧಾನ ಪರಿಷತ್‌ ಕೇಶವ ಪ್ರಸಾದ ಹೂಡಿರುವ ಮಾನಹಾನಿ ದಾವೆಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ಕೆ.ಎನ್‌. ಶಿವಕುಮಾರ ವಿಚಾರಣೆ ನಡೆಸಲಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 1ರ ವಿಚಾರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಮ್ಯಾಜಿಸ್ಟ್ರೇಟ್‌ ಅವರ ಮುಂದೆ ಹಾಜರಾಗಿದ್ದರು. ಇಬ್ಬರಿಂದಲೂ ತಲಾ 5 ಸಾವಿರ ರೂಪಾಯಿ ಮೌಲ್ಯದ ನಗದು ಬಾಂಡ್‌ ಪಡೆದು ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು.

ಈ ವೇಳೆ, ಸಂಸದ ರಾಹುಲ್‌ ಗಾಂಧಿ ಅವರು ಹಾಜರಾಗದೇ ಇದ್ದುದಕ್ಕೆ ಬಿಜೆಪಿ ಪರ ವಕೀಲ ಎಂ ವಿನೋದಕುಮಾರ ಎರಡು ಬಾರಿ ಗೈರಾಗಲು ಸಿಆರ್‌ಪಿಸಿ ಸೆಕ್ಷನ್‌ 205ನಲ್ಲಿ ಅವಕಾಶವಿಲ್ಲ. ಹೀಗಾಗಿ, ರಾಹುಲ್‌ ವಿರುದ್ಧ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಬೇಕು ಎಂದು ಕೋರಿದ್ದರು.
ಇತ್ತ ರಾಹುಲ್‌ ಪರ ವಕೀಲರಾದ ನಿಶಿತಕುಮಾತ ಶೆಟ್ಟಿ ಅವರು “ಸಿಆರ್‌ಪಿಸಿ ಸೆಕ್ಷನ್‌ 205 ಅಡಿ ರಾಹುಲ್‌ ಅವರ ಹಾಜರಾತಿಗೆ ಇಂದಿಗೆ ವಿನಾಯಿತಿ ನೀಡಬೇಕು. ಜೂನ್‌ 7ರಂದು ಖುದ್ದು ಅವರು ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ” ಎಂದು ತಿಳಿಸಿದ್ದರು. ಈ ವಾದವನ್ನು ಮ್ಯಾಜಿಸ್ಟ್ರೇಟ್‌ ಪುರಸ್ಕರಿಸಿ, ರಾಹುಲ್‌ ಹಾಜರಾತಿಗಾಗಿ ಪ್ರಕರಣವನ್ನು ಮುಂದೂಡಿದ್ದರು.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement