ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ನ್ಯದ ಪ್ರಕರಣದ ಸಂತ್ರಸ್ತೆ ಅಪಹರಿಸಿದ ಆರೋಪಿತ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಶಾಸಕ ಎಚ್. ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಶುಕ್ರವಾರ ಆಲಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ಇಂದು ಪ್ರಕಟಿಸಿದ್ದು, ಅವರು ನಿರೀಕ್ಷಣಾ ಜಾಮೀನು ಕೋರಿದ್ದ ಭವಾನಿ ಅವರ ಅರ್ಜಿಯನ್ನು ಪುರಸ್ಕರಿಸಿದ್ದಾರೆ. ಭವಾನಿ ರೇವಣ್ಣ ಅವರು ಮೈಸೂರು, ಹಾಸನ ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಆದರೆ, ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗಾಗಿ ಅವರನ್ನು ಈ ಜಿಲ್ಲೆಗಳಿಗೆ ಕರೆದೊಯ್ಯಬಹುದು ಎಂದು ಹೇಳಿದೆ.
“ಪೊಲೀಸರು ಆರೋಪಿಯನ್ನು ಕಸ್ಟಡಿಗೆ ಕೇಳಿದರೆ, ಕಣ್ಣು ಮುಚ್ಚಿಕೊಂಡು ನ್ಯಾಯಾಲಯವು ನೀಡಬೇಕು ಎಂದು ಪ್ರೊ. ರವಿವರ್ಮ ಕುಮಾರ್ ಹೇಳಿದ್ದರು. ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಬ್ಯಾಂಕಾಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲೂ ಮಹಿಳೆಯನ್ನು ಬಂಧಿಸುವಂತಿಲ್ಲ ಎಂದು ಹೇಳಲಾಗಿದೆ” ಎಂದು ನ್ಯಾ. ದೀಕ್ಷಿತ್ ಹೇಳಿದರು.
“ಎಸ್‌ಐಟಿ ಅಧಿಕಾರಿಗಳು ಸೂಚಿಸಿದಾಗ ಭವಾನಿ ವಿಚಾರಣೆಗೆ ಹಾಜರಾಗಿದ್ದಾರೆ. ಮಹಿಳೆಯರನ್ನು ಅನಗತ್ಯವಾಗಿ ಬಂಧಿಸುವ ಅವಶ್ಯಕತೆಯಿಲ್ಲ. ಅಲ್ಲದೆ, ಭವಾನಿ ಅವರು ಮತ್ತೆ ಕರೆದಾಗಲೂ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ಮೂರು ದಿನಗಳಲ್ಲಿ ಒಟ್ಟು 85 ಪ್ರಶ್ನೆಗಳನ್ನು ಕೇಳಲಾಗಿದ್ದು, ಎಲ್ಲದಕ್ಕೂ ಅವರು ಉತ್ತರಿಸಿದ್ದಾರೆ. ತಾವು ಬಯಸಿದಂತೆ ಆರೋಪಿ ಉತ್ತರಿಸಬೇಕು ಎಂದು ಪೊಲೀಸರು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ, ನಿರೀಕ್ಷಣಾ ಜಾಮೀನನ್ನು ಕಾಯಂಗೊಳಿಸಲಾಗಿದೆ. ಅಗತ್ಯ ಬಿದ್ದರೆ ಆರೋಪಿ ಭವಾನಿ ಅವರನ್ನು ಕೆ ಆರ್ ನಗರಕ್ಕೆ ವಿಚಾರಣೆಗೆ ಕರೆದೊಯ್ಯಲು ಎಸ್‌ಐಟಿಗೆ ಅನುಮತಿ ನೀಡಲಾಗಿದೆ” ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ