
ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಎಸ್ಟೋನಿಯಾದ ಬ್ಯಾಟರ್ ಸಾಹಿಲ್ ಚೌಹಾಣ್ ನೂತನ ವಿಶ್ವದಾಖಲೆ ಬರೆದಿದ್ದಾರೆ. ಅವರು ಕೇವಲ 27 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ..!
ಸೈಪ್ರಸ್ ತಂಡದ ವಿರುದ್ಧ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಎಸ್ಟೋನಿಯಾದ ಸಾಹಿಲ್ ಕೇವಲ 27 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಆ ಮೂಲಕ ವೆಸ್ಟ್‌ಇಂಡೀಸ್‌ನ ಬ್ಯಾಟರ್ ಕ್ರಿಸ್ ಗೇಲ್ ದಾಖಲೆಯನ್ನು ಮೂರು ಎಸೆತಗಳಿಂದ ಮುರಿದಿದ್ದಾರೆ. 2013ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಗೇಲ್ ಕೇವಲ 30 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು.
ಸೋಮವಾರ ಎಪಿಸ್ಕೋಪಿಯಲ್ಲಿ ನಡೆದ ಪಂದ್ಯದಲ್ಲಿ ಸೈಪ್ರಸ್ ಮೊದಲು ಬ್ಯಾಟ್ ಮಾಡಿ 191/7 ಸ್ಕೋರ್ ಮಾಡಿತು, ತರಂಜಿತ್ ಸಿಂಗ್ 17 ಎಸೆತಗಳಲ್ಲಿ 44 ರನ್ ಗಳಿಸಿದರು. ಸೈಪ್ರಸ್ ಪರ ಚಮಲ್ ಸದುನ್ 28 ರನ್ ಗಳಿಸಿದರೆ, ಎಸ್ಟೋನಿಯಾ ಪರ ಪ್ರಣಯ್ ಘೀವಾಲಾ ಮತ್ತು ಅರ್ಸ್ಲಾನ್ ಅಮ್ಜದ್ ತಲಾ ಎರಡು ವಿಕೆಟ್ ಪಡೆದರು.

ನಿಗದಿತ ಗುರಿ ಬೆನ್ನಟ್ಟಿದ ಎಸ್ಟೋನಿಯಾ ತಂಡವು ಉತ್ತಮ ಆರಂಭ ಮಾಡಲಿಲ್ಲ. ಕೇವಲ 40 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಸಾಹಿಲ್ ಚೌಹಾಣ ಅವರು ಇನ್ನಿಂಗ್ಸ್‌ನ ಮೇಲೆ ಹಿಡಿತ ಸಾಧಿಸಿದರು, ಕೇವಲ 14 ಎಸೆತಗಳಲ್ಲಿ ಅರ್ಧಶತಕ ತಲುಪಿದರು ಮತ್ತು 27 ಎಸೆತಗಳಲ್ಲಿ ಶತಕವನ್ನು ಪೂರೈಸಿದರು. ಅವರು 41 ಎಸೆತಗಳಲ್ಲಿ ಔಟಾಗದೆ 144 ರನ್ ಗಳಿಸಿದರು, ಎಸ್ಟೋನಿಯಾ ಏಳು ಓವರ್‌ಗಳು ಉಳಿದಿರುವಂತೆ ಆರು ವಿಕೆಟ್‌ಗಳಿಂದ ಪಂದ್ಯ ಗೆದ್ದಿತು. ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಾದ ಅತಿ ವೇಗದ ಶತಕ ಇದಾಗಿದೆ. ಆ ಮೂಲಕ ನಮೀಬಿಯಾದ ಜಾನ್ ನಿಕೋಲ್ ಲಾಫ್ಟಿ-ಈಟನ್ (33 ಎಸೆತ) ದಾಖಲೆಯನ್ನು ಮುರಿದಿದ್ದಾರೆ.
18 ಸಿಕ್ಸರ್ ಗಳಿಸಿದ ಸಾಹಿಲ್, ಟ್ವೆಂಟಿ-20 ಅಂತರಾಷ್ಟ್ರೀಯ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟರ್ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಈ ಹಿಂದೆ ಅಫ್ಗಾನಿಸ್ತಾನದ ಹಜ್ರತುಲ್ಲ ಜಾಜೈ ಹಾಗೂ ನ್ಯೂಜಿಲೆಂಡ್‌ನ ಫಿನ್ ಅಲೆನ್ ತಲಾ 16 ಸಿಕ್ಸರ್ ಗಳಿಸಿದ್ದರು.
ಟಿ-20 ಪಂದ್ಯ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದವರು…
ಸಾಹಿಲ್ ಚೌಹಾಣ : 27 ಎಸೆತ (2024)
ಕ್ರಿಸ್ ಗೇಲ್: 30 ಎಸೆತ (2013)
ರಿಷಭ್ ಪಂತ್: 32 ಎಸೆತ (2018)


ನಿಮ್ಮ ಕಾಮೆಂಟ್ ಬರೆಯಿರಿ