ಮುಂಬೈ: ‘ಹಮಾರೆ ಬಾರಹ’ ಸಿನಿಮಾ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಸಿನೆಮಾದಲ್ಲಿನ ಕೆಲವು ಆಕ್ಷೇಪಾರ್ಹ ಭಾಗಗಳಿಗೆ ಕತ್ತರಿ ಹಾಕಲು ಚಿತ್ರತಂಡವು ಒಪ್ಪಿದ ನಂತರ ಬಾಂಬೆ ಹೈಕೋರ್ಟ್ ಬಿಡುಗಡೆಗೆ ಅನುಮತಿ ನೀಡಿದೆ.
ಹಮಾರೆ ಬಾರಹ ಸಿನಿಮಾ ಜೂನ್ 7ಕ್ಕೆ ಬಿಡುಗಡೆ ಆಗಬೇಕಿತ್ತು. ನಂತರ ಇದರ ಬಿಡುಗಡೆ ದಿನಾಂಕವನ್ನು ಜೂನ್ 14ಕ್ಕೆ ಮುಂದೂಡಲಾಗಿತ್ತು.
ಈ ಚಿತ್ರವು ಕುರಾನ್ ಬಗ್ಗೆ ತಪ್ಪು ಮಾಹಿತಿ ನೀಡುತ್ತದೆ ಹಾಗೂ ಇಸ್ಲಾಮಿಕ್ ನಂಬಿಕೆಗಳು ಹಾಗೂ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನ ಮಾಡುತ್ತದೆ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿಗಳನ್ನು ಸಲ್ಲಿಸಿ ಚಿತ್ರದ ಬಿಡುಗಡೆಗೆ ನಿಷೇಧ ಹೇರಬೇಕು ಎಂದು ಕೋರಲಾಗಿತ್ತು.
ಚಲನಚಿತ್ರವನ್ನು ವೀಕ್ಷಿಸಿದ ನ್ಯಾಯಮೂರ್ತಿಗಳಾದ ಬಿ.ಪಿ. ಕೊಲಾಬಾವಾಲಾ ಮತ್ತು ಫಿರ್ದೋಷ್ ಪೂನಿವಾಲಾ ಅವರಿದ್ದ ವಿಭಾಗೀಯ ಪೀಠವು ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ತರುವಂತೆ ಸಲಹೆ ಮಾಡಿತು. ಇದಕ್ಕೆ ಅರ್ಜಿದಾರರು ಹಾಗೂ ಚಿತ್ರತಂಡದ ಸದಸ್ಯರು ಒಪ್ಪಿದರು. ಹೀಗಾಗಿ ಚಿತ್ರತಂಡವು ಅಗತ್ಯ ಬದಲಾವಣೆಗಳನ್ನು ತಂದು ‘ಹಮಾರೆ ಬಾರಹ’ ಸಿನಿಮಾ ಬಿಡುಗಡೆ ಮಾಡಬಹುದು ಎಂದು ಪೀಠವು ಹೇಳಿದೆ. ಅಲ್ಲದೆ, ಸಿಬಿಎಫ್ಸಿಯಿಂದ ಪ್ರಮಾಣಪತ್ರ ಸಿಗುವ ಮೊದಲೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಕ್ಕೆ ಹೈಕೋರ್ಟ್, ಈ ಚಿತ್ರತಂಡಕ್ಕೆ ₹5 ಲಕ್ಷ ದಂಡ ವಿಧಿಸಿದೆ.
ಅಗತ್ಯ ಬದಲಾವಣೆಗಳನ್ನು ಮಾಡಿ, ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (ಸಿಬಿಎಫ್ಸಿ) ಪ್ರಮಾಣಪತ್ರ ಪಡೆಯಲಾಗುತ್ತದೆ ಎಂದು ಚಿತ್ರತಂಡವು ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ