ದರ್ಶನ, ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅವಿಶ್ವಾಸಾರ್ಹ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ

ಬೆಂಗಳೂರು : ನಟ ದರ್ಶನ ಮತ್ತು ವಿಜಯಲಕ್ಷ್ಮಿ ಅವರಿಗೆ ಸಂಬಂಧಿಸಿದ ವೈಯಕ್ತಿಕ, ಕೌಟುಂಬಿಕ ಮಾಹಿತಿಯನ್ನಾಗಲಿ ಅಥವಾ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಅವಿಶ್ವಾಸಾರ್ಹ ಮಾಹಿತಿ ಅಥವಾ ಅಭಿಪ್ರಾಯಗಳನ್ನಾಗಲಿ ಪ್ರಸಾರ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸಿ ಬೆಂಗಳೂರಿನ ಸತ್ರ ನ್ಯಾಯಾಲಯವು ಬುಧವಾರ ಆದೇಶಿಸಿದೆ.
ದರ್ಶನ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಲ್ಲಿಸಿರುವ ಮೂಲ ದಾವೆಯ ಭಾಗವಾದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ 10ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ ರೈ ಈ ಆದೇಶ ಮಾಡಿದ್ದಾರೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
“ಒಟ್ಟು 38 ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳ ವರದಿಗಾರರು, ಸುದ್ದಿ ನಿರೂಪಕರು ಹಾಗೂ ಪ್ರತಿವಾದಿ ಮಾಧ್ಯಮಗಳಿಗೆ ಸಂಬಂಧಿಸಿದ ಯಾರೂ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ, ಆಕೆಯ ಪತಿ ದರ್ಶನ ಅವರ ವೈಯಕ್ತಿಕ ಮತ್ತು ಕೌಟುಂಬಿಕ ಬದುಕಿಗೆ ಸಂಬಂಧಿಸಿದ ಅವಿಶ್ವಾಸಾರ್ಹವಾದ ಯಾವುದೇ ಸುದ್ದಿ/ಅಭಿಪ್ರಾಯವನ್ನು ಮುದ್ರಣ, ಪ್ರಸಾರ, ಹಂಚಿಕೆ ಮಾಡಬಾರದು ಎಂದು ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶ ಮಾಡಿದೆ. ಪ್ರತಿವಾದಿಗಳಿಗೆ ಸಮನ್ಸ್‌ ಜಾರಿ ಮಾಡಿ ಜುಲೈ 11ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಎರಡನೇ ಆರೋಪಿಯಾಗಿರುವ ಪತಿ ದರ್ಶನ ಅವರ ವಿರುದ್ಧ ಅವಿಶ್ವಾಸಾರ್ಹವಾದ ಸುದ್ದಿ/ಅಭಿಪ್ರಾಯ, ಗಾಳಿಸುದ್ದಿ, ತಿರುಚಿದ ಸುದ್ದಿ, ತನ್ನ ಘನತೆಗೆ ಹಾನಿ ಮಾಡುವ ಅಸತ್ಯದ ಸುದ್ದಿಗಳನ್ನು ಪ್ರಸಾರ/ಪ್ರಕಟ ಮಾಡದಂತೆ ವರದಿಗಾರರು, ಸುದ್ದಿ ನಿರೂಪಕರಿಗೆ ನಿರ್ಬಂಧಿಸಬೇಕು ಎಂದು ವಿಜಯಲಕ್ಷ್ಮಿ ಕೋರಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ಪ್ರಗತಿಯಲ್ಲಿದ್ದು, ತಮ್ಮ ಪತಿ ದರ್ಶನ್‌ ವಿರುದ್ಧದ ಆರೋಪಗಳು ಇನ್ನೂ ಸಾಬೀತಾಗಿಲ್ಲ. ಸತ್ಯಕ್ಕೆ ದೂರವಾದ ಸುದ್ದಿ ಪ್ರಕಟಿಸುವ ಮೂಲಕ ಪೊಲೀಸರ ಸಂಕಥನ ಮಂಡಿಸುವ ಮೂಲಕ ದುರುದ್ದೇಶಪೂರ್ವಕವಾಗಿ ಪ್ರತಿವಾದಿ ಮಾಧ್ಯಮಗಳು ಪತಿ ದರ್ಶನ್‌ ಅವರನ್ನು ಗುರಿಯಾಗಿಸಿಕೊಂಡಿವೆ. ಮಾಧ್ಯಮಗಳ ಈ ವರ್ತನೆಯು ಮಾಧ್ಯಮ ವಿಚಾರಣೆಯಲ್ಲದೆ ಬೇರೇನೂ ಅಲ್ಲ. ಇಡೀ ಪ್ರಕರಣದಲ್ಲಿ ಪ್ರತಿವಾದಿ ಮಾಧ್ಯಮಗಳು ತಮ್ಮ ಪತಿಯ ಪಾತ್ರವನ್ನು ಪೂರ್ವನಿರ್ಧರಿಸಿದ್ದಾರೆ ಎಂದು ವಿಜಯಲಕ್ಷ್ಮಿ ಅವರ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ವಿಜಯಲಕ್ಷ್ಮಿ ಅವರ ಪರವಾಗಿ ವಕೀಲ ಪರಿತೋಷ ಸಿದ್ದಾಪುರಮಠ ವಕಾಲತ್ತು ಹಾಕಿದ್ದು, ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ವಾದಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement