ಸಂಗಾತಿಗಳಲ್ಲಿ ಒಬ್ಬರು ವಿವಾಹಿತರಾಗಿದ್ದರೆ ಲಿವ್-ಇನ್ ಸಂಬಂಧ ಮಾನ್ಯವಾಗುವುದಿಲ್ಲ : ಮದ್ರಾಸ್ ಹೈಕೋರ್ಟ್

ಚೆನ್ನೈ : ಸಂಗಾತಿಗಳಲ್ಲಿ ಒಬ್ಬರು ವಿವಾಹ ಸಂಬಂಧದಲ್ಲಿದ್ದರೆ ಆಗ ಅವರ ಸಹಜೀವನ (ಲಿವ್-ಇನ್) ಸಂಬಂಧ ಕಾನೂನುಬದ್ಧ ಆಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಸಹಜೀವನ (ಲಿವ್-ಇನ್) ನಡೆಸುತ್ತಿರುವವರಲ್ಲಿ ಒಬ್ಬರಿಗೆ ಈಗಾಗಲೇ ವಿವಾಹವಾಗಿದ್ದರೆ ಅವರು ಲಿವ್‌- ಇನ್‌ ಸಂಗಾತಿಯ ಆಸ್ತಿಯ ಉತ್ತರಾಧಿಕಾರ ಅಥವಾ ಪಿತ್ರಾರ್ಜಿತ ಹಕ್ಕುಗಳನ್ನು ಪಡೆಯಲು ಆಗುವುದಿಲ್ಲ ಎಂದು ಜೂನ್ 7ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ಆರ್‌ಎಂಟಿ ಟೀಕಾ ರಾಮನ್ ಅವರು ಹೇಳಿದ್ದಾರೆ.
ಪಕ್ಷಕಾರರಿಬ್ಬರೂ ವಯಸ್ಕ ಅವಿವಾಹಿತರಾಗಿದ್ದು ಅಂತಹವರು ಸಹಜೀವನಕ್ಕೆ ಮುಂದಾದರೆ ಆಗ ಪರಿಸ್ಥಿತಿ ಭಿನ್ನವಾಗಿರುತ್ತದೆ. ವಿವಾಹೇತರ ಸಂಬಂಧದಲ್ಲಿ ತೊಡಗುವವರೂ ತಮ್ಮ ಸಂಬಂಧಕ್ಕೆ ಸಹಜೀವನದ (ಲಿವ್-ಇನ್) ಹಣೆಪಟ್ಟಿ ಕಟ್ಟುತ್ತಿದ್ದಾರೆ. ಇದನ್ನು ಒಪ್ಪಲು ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ಜಯಚಂದ್ರನ್‌ ಮತ್ತು ಮಾರ್ಗರೇಟ್‌ ಅರುಲ್‌ಮೋಳಿ ಅವರು ಪರಸ್ಪರ ವಿವಾಹವಾಗದೆ ಸಹಜೀವನ ನಡೆಸುತ್ತಿದ್ದರು. ಜಯಚಂದ್ರನ್‌ ಅವರು ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದರು. ದಂಪತಿಗೆ ಐವರು ಮಕ್ಕಳಿದ್ದರು. ಆದರೆ ಅವರು ಕಾನೂನು ಪ್ರಕಾರ ವಿಚ್ಛೇದನ ಪಡೆದಿರಲಿಲ್ಲ. ಈ ಮಧ್ಯೆ ಸಹಜೀವನ ನಡೆಸುತ್ತಿದ್ದ ಜಯಚಂದ್ರನ್‌ ಮತ್ತು ಮಾರ್ಗರೇಟ್‌ ಮನೆ ಖರೀದಿಸಿದ್ದರು. ನಂತರ ಮಾರ್ಗರೇಟ್‌ ಹೆಸರಿನಲ್ಲಿ ಮನೆಯನ್ನು ನೋಂದಾಯಿಸಲಾಗಿತ್ತು.
2013ರಲ್ಲಿ ಮಾರ್ಗರೇಟ್‌ ಮೃತಪಟ್ಟಾಗ ಜಯಚಂದ್ರನ್‌ ಏಕಪಕ್ಷೀಯವಾಗಿ ನಿವೇಶನ ಪತ್ರವನ್ನು ರದ್ದುಪಡಿಸಿ ಆ ಮನೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಮುಂದಾದರು. ಆಗ ಮಾರ್ಗರೇಟ್‌ ತಂದೆ (ಈಗ ತಂದೆ ಕೂಡ ನಿಧನರಾಗಿದ್ದಾರೆ) ತನ್ನ ದಿವಂಗತ ಮಗಳ ಆಸ್ತಿಯ ಮೇಲೆ ಹಕ್ಕು ಮಂಡಿಸಿದ್ದರು. ಅವರ ಹಕ್ಕನ್ನು ವಿಚಾರಣಾ ನ್ಯಾಯಾಲಯ ಒಪ್ಪಿತ್ತು.

ಪ್ರಮುಖ ಸುದ್ದಿ :-   ಹಲ್ಲಿಲ್ಲದ ಹಾವಿನಿಂದ ಬಯಲಾದ ಗಂಡನ ಕೊಲೆ ಕೃತ್ಯ ; ಪತ್ನಿ-ಪ್ರಿಯಕರನಿಗೆ ಮರಣದಂಡನೆ ಶಿಕ್ಷೆ

ಇದನ್ನು ಪ್ರಶ್ನಿಸಿ ಜಯಚಂದ್ರನ್‌ ಹೈಕೋರ್ಟ್ ಮೆಟ್ಟಿಲೇರಿದ್ದರು. ತಾನು ಮತ್ತು ಮಾರ್ಗರೇಟ್‌ ಕಾನೂನುಬದ್ಧವಾಗಿ ಮದುವೆಯಾಗದೇ ಇದ್ದರೂ ಸತಿ- ಪತಿಯರಂತೆ ಒಟ್ಟಿಗೆ ಸಹಜೀವನ ನಡೆಸಿದ್ದೆವು. ಹೀಗಾಗಿ ಆಕೆಯ ಮರಣದ ನಂತರ ಆಸ್ತಿಯ ಹಕ್ಕು ತನಗೇ ಸೇರಬೇಕು ಎಂದು ವಾದಿಸಿದ್ದರು.
ಆದರೆ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಮಾರ್ಗರೇಟ್‌ ಅವರೊಂದಿಗೆ ಲಿವ್‌ ಇನ್‌ ಸಂಬಂಧದಲ್ಲಿ ಇದ್ದುದ್ದರಿಂದ ಪತಿ- ಪತ್ನಿಯ ಕಾನೂನು ಸ್ಥಾನಮಾನ ಒದಗಿಸುವುದಿಲ್ಲ ಎಂದುವಿಚಾರಣಾ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್‌ ವಿಚಾರಣೆ ಬಾಕಿ ಇರುವಾಗಲೇ ಮಾರ್ಗರೇಟ್‌ ತಂದೆ ಮೃತಪಟ್ಟಿದ್ದರಿಂದ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳು ಆಸ್ತಿಯ ಮಾಲೀಕರಾಗುತ್ತಾರೆ ಎಂದು ಹೇಳಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement