ಪೋಕ್ಸೊ ಪ್ರಕರಣ : ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯು ಗುರುವಾರ ವಿಶೇಷ ಪೋಕ್ಸೊ ನ್ಯಾಯಾಲಯಕ್ಕೆ ಸುಮಾರು 700 ಪುಟಗಳ ಆರೋಪ ಪಟ್ಟಿ ಸಲ್ಲಿಕೆ ಮಾಡಿದೆ.
ಯಡಿಯೂರಪ್ಪ ಸೇರಿ ನಾಲ್ವರ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದ್ದು, ಮೂವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಿಗೆ ಸಂಬಂಧಿಸಿದಂತೆ ಮಾತ್ರ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.
ಯಡಿಯೂರಪ್ಪ ಅವರು ಎಫ್‌ಐಆರ್‌ ರದ್ದತಿ ಕೋರಿ ಹಾಗೂ ಪ್ರಕರಣದಲ್ಲಿ ತಮಗೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಕೆ ಮಾಡಿರುವ ಅರ್ಜಿಗಳು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿವೆ. ಈ ನಿಟ್ಟಿನಲ್ಲಿ ಸಿಐಡಿ ಆರೋಪ ಪಟ್ಟಿ ಸಲ್ಲಿಸಿರುವ ವಿಚಾರಕ್ಕೆ ಮಹತ್ವ ಬಂದಿದೆ. ಕಳೆದ ವಿಚಾರಣೆಯಲ್ಲಿ ಯಡಿಯೂರಪ್ಪ ಬಂಧನಕ್ಕೆ ಹೈಕೋರ್ಟ್‌ ತಡೆ ನೀಡಿತ್ತು.
ಸಿಐಡಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ ನಾಯಕ್‌ ಅವರು ಬೆಂಗಳೂರಿನ 51ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುವ ತ್ವರಿತಗತಿಯ ವಿಶೇಷ ನ್ಯಾಯಾಲಯ-1ರ ನ್ಯಾಯಾಧೀಶ ಎನ್ ಎಂ ರಮೇಶ ಪೀಠದಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡಿದರು.

ಪ್ರಮುಖ ಸುದ್ದಿ :-   ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 3 ದಿನ ಜೋರಾದ ಗಾಳಿ ಮಳೆಯ ಮುನ್ಸೂಚನೆ

ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯಿದೆ ಸೆಕ್ಷನ್‌ 8, ಐಪಿಸಿ ಸೆಕ್ಷನ್‌ಗಳಾದ 354(ಎ), 204, 214 ಅಡಿ, ಎರಡನೇ ಆರೋಪಿ ಅರುಣ್‌ ಎಂ ವೈ, ಮೂರನೇ ಆರೋಪಿ ಎಂ ರುದ್ರೇಶ್‌ ಮತ್ತು ನಾಲ್ಕನೇ ಆರೋಪಿ ಜಿ ಮರಿಸ್ವಾಮಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 204, 214ರ ಅಡಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.
ಯಡಿಯೂರಪ್ಪ ನಿರ್ದೇಶನದಂತೆ ಮೂರನೇ ಆರೋಪಿ ರುದ್ರೇಶ್‌ ಅವರಿಂದ 2 ಲಕ್ಷ ರೂಪಾಯಿ ಪಡೆದು ಅದನ್ನು ಫಿರ್ಯಾದಿಯಾಗಿರುವ ಸಂತ್ರಸ್ತೆ ಮಹಿಳೆಗೆ ನೀಡಿದ್ದಾರೆ, ಅಲ್ಲದೆ,ದೇ ಆಕೆಯ ಐ-ಫೋನ್‌ನಲ್ಲಿನ ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ವೀಡಿಯೊ ಡಿಲೀಟ್‌ ಮಾಡಿಸಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಿಂದ ತೆಗೆಸಿದ್ದಾರೆ ಎಂದು ಅರುಣ ಮತ್ತು ಮರಿಸ್ವಾಮಿ ಮೇಲೆ ಆರೋಪಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಸಂತ್ರಸ್ತೆಯ ತಾಯಿ ನೀಡಿದ್ದ ದೂರಿನ ಅನ್ವಯ ಸಂತ್ರಸ್ತೆಯ ಮೇಲೆ ಈ ಹಿಂದೆ ಅತ್ಯಾಚಾರವಾಗಿದ್ದು, ಈ ಸಂಬಂಧ ವಿಶೇಷ ತನಿಖಾ ದಳ ರಚಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ನೆರವಾಗುವಂತೆ ಕೋರಲು ಸಂತ್ರಸ್ತೆ ಮತ್ತು ಆಕೆಯ ತಾಯಿ ಯಡಿಯೂರಪ್ಪ ಅವರನ್ನು 2024ರ ಫೆಬ್ರವರಿ 2ರಂದು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನಮ್ಮ ಜೊತೆ ಒಂಭತ್ತು ನಿಮಿಷ ಮಾತನಾಡಿ, ನಮಗೆ ಟೀ ಕುಡಿಸಿದರು. ಆನಂತರ ನನ್ನ ಮಗಳನ್ನು ಕೊಠಡಿಗೆ ಕರೆದೊಯ್ದು ಚಿಲಕ ಹಾಕಿಕೊಂಡಿದ್ದರು. ಈ ವೇಳೆ ಲೈಂಗಿಕ ದೌರ್ಜನ್ಯವೆಸಗಿದ್ದರು. ಆಕೆ ಹೊರಹೋಗಲು ಬಾಗಿಲು ತೆರೆಯುವಂತೆ ಒತ್ತಾಯಿಸಿದಾಗ ಯಡಿಯೂರಪ್ಪ ಅವರೇ ಬಾಗಿಲು ತೆರೆದಿದ್ದು, ತಕ್ಷಣ ಓಡಿ ಬಂದ ಪುತ್ರಿ ಘಟನೆಯನ್ನು ವಿವರಿಸಿದಳು. ಯಡಿಯೂರಪ್ಪ ಅವರು ತಮ್ಮ ಅನುಚಿತ ವರ್ತನೆಯ ಘಟನೆಯ ವಿಚಾರವನ್ನು ಹೊರೆಗೆ ಬಾಯಿ ಬಿಡದಂತೆ ತಡೆಯಲು ತುಂಬಾ ಪ್ರಯತ್ನಿಸಿದರು ಎಂದು ಸಂತ್ರಸ್ತೆಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಪೋಕ್ಸೊ ಕಾಯಿದೆ ಸೆಕ್ಷನ್‌ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ ಸೆಕ್ಷನ್‌ 354 (ಎ) ಅಡಿ (ಲೈಂಗಿಕ ಕಿರುಕುಳ) ಯಡಿಯೂರಪ್ಪ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement