ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಚರ್ಚೆಗೆ ಅವಕಾಶ ನೀಡದ ರಾಜ್ಯಸಭಾ ಚೇರ್ಮನ್ ನಿರ್ಧಾರದ ವಿರುದ್ಧ ಪ್ರತಿಭಟಿಸುತ್ತಿರುವಾಗ ಕಾಂಗ್ರೆಸ್ ಸದಸ್ಯರೊಬ್ಬರು ಸದನದ ಬಾವಿಯಲ್ಲಿ ಮೂರ್ಛೆ ಹೋದ ಘಟನೆ ಶುಕ್ರವಾರ (ಜೂನ್ 28)ರಂದು ರಾಜ್ಯಸಭೆಯಲ್ಲಿ ನಡೆಯಿತು.
ನೆಲದ ಮೇಲೆ ಬಿದ್ದಿದ್ದ ನೇತಾಮ್ ಅವರನ್ನು ತಕ್ಷಣವೇ ಆಂಬುಲೆನ್ಸ್ ನಲ್ಲಿ ರಾಮ್ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದಾಗಿ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.
ವಿರಾಮದ ನಂತರ ರಾಜ್ಯಸಭೆ ಮತ್ತೆ ಸಭೆ ಸೇರಿದ ತಕ್ಷಣ, ಕಾಂಗ್ರೆಸ್ ಸದಸ್ಯೆ ಫುಲೋ ದೇವಿ ನೇತಮ್ ಸೇರಿದಂತೆ ಹಲವಾರು ವಿಪಕ್ಷಗಳ ಸದಸ್ಯರು ಸದನದ ಬಾವಿಗೆ ನುಗ್ಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ನೀಟ್ ಅಕ್ರಮಗಳ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ಈ ವೇಳೆ ಛತ್ತೀಸ್‌ಗಢದಿಂದ ಆಯ್ಕೆಯಾಗಿರುವ ಫುಲೋ ದೇವಿ ನೇತಮ್ ಅವರು ಇದ್ದಕ್ಕಿದ್ದಂತೆ ತಲೆತಿರುಗಿ ಬಿದ್ದಿದ್ದಾರೆ.
ನೇತಂ ಅವರು ಮೂರ್ಛೆ ಹೋಗುವುದನ್ನು ಕಂಡ ರಾಜ್ಯಸಭೆ ಚೇರ್ಮನ್ ಆದ ಉಪರಾಷ್ಟ್ರಪತಿ ಜಗದೀಪ ಧನಕರ ಅವರು ಸಹ ಸದಸ್ಯರಿಗೆ ಸಹಾಯ ಮಾಡುವಂತೆ ಕೇಳಿಕೊಂಡರು ಹಾಗೂ ಸದನವನ್ನು ಮಧ್ಯಾಹ್ನ 2:30ಕ್ಕೆ ಮುಂದೂಡಿದರು. ನಂತರ ರಾಜ್ಯಸಭಾ ಮಹಿಳಾ ಸದಸ್ಯೆಯನ್ನು ಆಂಬ್ಯುಲೆನ್ಸ್‌ನಲ್ಲಿ ಆರ್‌ಎಂಎಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ನೇತಂ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರಿಗೆ ಸಿಟಿ ಸ್ಕ್ಯಾನ್ ಮಾಡಲಾಗುತ್ತದೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಿನ ವೈದ್ಯಕೀಯ ತಪಾಸಣೆ ನಡೆಸಲಾಗುವುದು ಎಂದು ಹೇಳಿದರು.
“ಅವರು ಈಗ ಚೆನ್ನಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ, ಆದರೆ ಅವರು ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗಿದೆ” ಎಂದು ಅವರು ಹೇಳಿದರು.
ಸದನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ಕುರಿತು ಚರ್ಚೆ ನಡೆಯುತ್ತಿದ್ದು, ಬಿಜೆಪಿ ಸದಸ್ಯೆ ಕವಿತಾ ಪಾಟಿದಾರ್ ಅವರು ಬಿಜೆಪಿಯ ಸುದಾಂಶು ತ್ರಿವೇದಿ ಮಂಡಿಸಿದ ನಿರ್ಣಯವನ್ನು ಅನುಮೋದಿಸಿದ್ದರು.
ಘಟನೆಯನ್ನು ವಿವರಿಸಿದ ಡಿಎಂಕೆ ಪಕ್ಷದ ಸದನದ ನಾಯಕ ತಿರುಚಿ ಶಿವಾ, ಫುಲೋ ದೇವಿ ನೇತಮ್ ಅವರ ರಕ್ತದೊತ್ತಡ 214/113 ಆಗಿತ್ತು ಎಂದು ಹೇಳಿದರು. .
ನಿಮ್ಮ ಕಾಮೆಂಟ್ ಬರೆಯಿರಿ