ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಬಾರದು. ಆದರೆ, ಪ್ರೀತಂ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಪ್ರೀತಂ ಗೌಡ ಅವರ ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ವಾದ-ಪ್ರತಿವಾದ ಆಲಿಸಿದ ಪೀಠವು “ಎಸ್‌ಐಟಿ ತನಿಖೆ ನಡೆಸಬಹುದು. ಆದರೆ, ಅರ್ಜಿದಾರ ಪ್ರೀತಂ ಗೌಡ ತನಿಖೆಗೆ ಸಹಕರಿಸದ ಹೊರತು ಅವರನ್ನು ಬಂಧಿಸಬಾರದು. ಅರ್ಜಿದಾರರು ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೆ ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು” ಎಂದು ಆದೇಶಿಸಿದೆ.
ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ಪ್ರೀತಂ ವೀಡಿಯೊ ಹಂಚಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಾರೆ ಎಂದು ಪ್ರಕರಣ ದಾಖಲಿಸುವುದು ಸರಿಯಲ್ಲ. ಪ್ರೀತಂ ಅವರ ಮೇಲೆ ಯಾವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ? ಐಪಿಸಿ ಸೆಕ್ಷನ್‌ಗಳಾದ 354ಎ, 354ಡಿ, 354ಸಿ ಮತ್ತು 506 ಅನ್ವಯಿಸಲಾಗಿದೆ. ಪ್ರೀತಂ ಏನು ಮಾಡಿದ್ದಾರೆ ಎಂಬುದನ್ನು ಎಸ್‌ಐಟಿ ಹೇಳಬೇಕು” ಎಂದರು.
“ಸರ್ಕಾರದವರೇ ಮೂರು ಲಕ್ಷ ಪೆನ್‌ಡ್ರೈವ್‌ಗಳನ್ನು ಹಾಸನ ಮತ್ತು ಮಂಡ್ಯ ಜಿಲ್ಲೆಯಲ್ಲಿ ಹಂಚಿಕೆ ಮಾಡಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸುತ್ತಾರೆಯೇ? ದೂರು ನೀಡಿದರೆ ಪ್ರಕರಣ ದಾಖಲಿಸುತ್ತಾರೆಯೇ ? 354ಎ, 354ಡಿ, 354ಸಿ ಜಾಮೀನುರಹಿತ ಪ್ರಕರಣವಾಗಿದ್ದು, ಅದಕ್ಕೆ ರಕ್ಷಣೆ ನೀಡಬೇಕು. ಪ್ರೀತಂ ಅವರು ವಿಚಾರಣೆಗೆ ಕರೆದರೆ ಹೋಗುತ್ತಾರೆ. ಅದಕ್ಕೆ ಬೇಕಿದ್ದರೆ ಷರತ್ತು ವಿಧಿಸಿಬಹುದು ಎಂದು ವಾದಿಸಿದರು.
ರಾಜ್ಯ ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮಕುಮಾರ ಅವರು 20 ದಿನಗಳ ಹಿಂದೆ ಎಫ್‌ಐಆರ್ ದಾಖಲಿಸಲಾಗಿದೆ. ನಮಗೆ ಯಾವುದೇ ಸೂಚನೆ ಇಲ್ಲ. ಅರ್ಜಿದಾರರ ನಡತೆಯನ್ನು ನೋಡಿ. ವೀಡಿಯೊ ಹಂಚಿಕೆಯಾಗಿದೆ ಎಂಬ ವಿಚಾರವನ್ನು ನ್ಯಾಯಾಲಯ ಪರಿಗಣಿಸಬೇಕು. ವೀಡಿಯೊ ಹಂಚಿಕೆ ಮಾಡುವುದೇ ಹೀನಕೃತ್ಯ ಎಂದು ವಾದಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ