
ನವದೆಹಲಿ: ಇಂದು, ಶುಕ್ರವಾರ ಬೆಳಿಗ್ಗೆ ಸುರಿದ ಭಾರೀ ಮಳೆಯ ನಡುವೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ -1 (ಟಿ 1)ರ ಛಾವಣಿಯ ಒಂದು ಭಾಗ ಕುಸಿದು ಕಾರುಗಳ ಮೇಲೆ ಬಿದ್ದ ಪರಿಣಾಮ ಕನಿಷ್ಠ ಒಬ್ಬರು ಸಾವಿಗೀಡಾಗಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ. ದೇಶೀಯ ವಿಮಾನ ಕಾರ್ಯಾಚರಣೆಗಳನ್ನು ಹೊಂದಿರುವ ಟರ್ಮಿನಲ್ 1 ರಿಂದ ಎಲ್ಲಾ ವಿಮಾನ ಸಂಚಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
“ಇಂದು (ಶುಕ್ರವಾರ) ಮುಂಜಾನೆ ಭಾರೀ ಮಳೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಮೇಲ್ಛಾವಣಿ ಕುಸಿದಿದೆ. ಇದರ ಪರಿಣಾಮವಾಗಿ, ಟರ್ಮಿನಲ್ 1 ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಮುಂದಿನ ಸೂಚನೆ ತನಕ ಸ್ಥಗಿತಗೊಳಿಸಲಾಗಿದೆ. ವಿಮಾನಗಳ ಸುಗಮ ಕಾರ್ಯಾಚರಣೆಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಎಂದು ಸಚಿವಾಲಯವು ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ತಿಳಿಸಿದೆ.

ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ನ ಪಿಕ್-ಅಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ಕಾರುಗಳಿಗೆ ರೂಫ್ ಶೀಟ್ ಕುಸಿದು ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಕಬ್ಬಿಣದ ಬೀಮ್ ಬಿದ್ದ ಕಾರಿನಿಂದ ವ್ಯಕ್ತಿಯನ್ನು ಹೊರತೆಗೆಯುತ್ತಿರುವುದು ಕಂಡುಬಂದಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಛಾವಣಿ ಕುಸಿದಿದ್ದರಿಂದ ಇಂಡಿಗೋ, ಸ್ಪೈಸ್ಜೆಟ್ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ
ದೆಹಲಿ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 1 ರ ರಚನಾತ್ಮಕ ಹಾನಿಯಿಂದಾಗಿ ತನ್ನ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ ಎಂದು ಇಂಡಿಗೋ ಹೇಳಿದೆ. ಈ ಘಟನೆಯು ದೆಹಲಿಯಲ್ಲಿ “ಪ್ರಯಾಣಿಕರು ಟರ್ಮಿನಲ್ಗೆ ಪ್ರವೇಶಿಸಲು ಸಾಧ್ಯವಾಗದ ಕಾರಣ” ವಿಮಾನ ರದ್ದತಿಗೆ ಕಾರಣವಾಯಿತು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಕಿಂಜರಾಪು ಅವರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಟರ್ಮಿನಲ್ 1 ಅನ್ನು ಪರಿಶೀಲಿಸಿದರು. ಇದು “ಅತ್ಯಂತ ಗಂಭೀರ ಘಟನೆ” ಎಂದು ಕರೆದ ಅವರು ಸಂತ್ರಸ್ತರ ಕುಟುಂಬ ಮತ್ತು ಗಾಯಗೊಂಡವರಿಗೆ ಪರಿಹಾರವನ್ನು ಘೋಷಿಸಿದರು. ತಾತ್ಕಾಲಿಕವಾಗಿ ಟರ್ಮಿನಲ್ 2 ಮತ್ತು ಟರ್ಮಿನಲ್ 3 ಕ್ಕೆ ವಿಮಾನ ಕಾರ್ಯಾಚರಣೆಯನ್ನು ಬದಲಾಯಿಸಲಿದೆ ಎಂದು ಅವರು ಹೇಳಿದರು.
T1 ಇಂಡಿಗೋ ಮತ್ತು ಸ್ಪೈಸ್ಜೆಟ್ನಿಂದ ದೇಶೀಯ ವಿಮಾನ ಕಾರ್ಯಾಚರಣೆಗಳನ್ನು ಮಾತ್ರ ಹೊಂದಿದೆ. ವಿಮಾನ ನಿಲ್ದಾಣವು ಮೂರು ಟರ್ಮಿನಲ್ಗಳನ್ನು ಹೊಂದಿದೆ, T1, T2 ಮತ್ತು T3, ಮತ್ತು ಪ್ರತಿದಿನ ಸುಮಾರು 1,400 ವಿಮಾನಗಳ ಹಾರಾಟಗಳನ್ನು ನಿರ್ವಹಿಸುತ್ತದೆ.
ಮುಂದಿನ ಸೂಚನೆ ಬರುವವರೆಗೂ ಸ್ಪೈಸ್ಜೆಟ್ ತನ್ನ ವಿಮಾನಗಳನ್ನು ರದ್ದುಗೊಳಿಸಿದೆ. ಹೆಚ್ಚಿನ ನವೀಕರಣಗಳಿಗಾಗಿ ದಯವಿಟ್ಟು ನಮ್ಮ ಸಾಮಾಜಿಕ ಮಾಧ್ಯಮ ಚಾನೆಲ್ಗಳನ್ನು ವೀಕ್ಷಿಸಿ ಎಂದು ಏರ್ಲೈನ್ ತನ್ನ ಪ್ರಯಾಣಿಕರಿಗೆ ತಿಳಿಸಿದೆ.
ದೆಹಲಿಯಲ್ಲಿ ಭಾರೀ ಮಳೆ
ದೆಹಲಿಯಲ್ಲಿ ಇಂದು ಸತತ ಎರಡನೇ ದಿನ ಭಾರಿ ಮಳೆಯಾಗಿದೆ. ಮಳೆಯಿಂದ ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಜಲಾವೃತವಾಯಿತು. ರಾಜಧಾನಿಯ ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್ಜಂಗ್ ವೀಕ್ಷಣಾಲಯವು ನಿನ್ನೆ ಮತ್ತು ಇಂದು, ಶುಕ್ರವಾರ ಬೆಳಿಗ್ಗೆ ನಡುವೆ 154 ಮಿಮೀ ಮಳೆಯನ್ನು ದಾಖಲಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ದೆಹಲಿಯಲ್ಲಿ ಮಳೆಯಿಂದಾಗಿ ಗುರುವಾರ ತಾಪಮಾನವು 35.4 ಡಿಗ್ರಿ ಸೆಲ್ಸಿಯಸ್ಗೆ ಇಳಿದಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ