ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನೂತನ ಮಹಾಪೌರರಾಗಿ ಬಿಜೆಪಿಯ ರಾಮಪ್ಪ ಬಡಿಗೇರ ಹಾಗೂ ಉಪ ಮಹಾಪೌರರಾಗಿ ದುರಗಮ್ಮ ಬಿಜವಾಡ ಆಯ್ಕೆಯಾಗಿದ್ದಾರೆ.
ಶನಿವಾರ ನಡೆದ ಮಹಾಪೌರ ಚುನಾವಣೆಗೆ ಬಿಜೆಪಿಯಿಂದ ರಾಮಪ್ಪ ಬಡಿಗೇರ, ಕಾಂಗ್ರೆಸ್ ನಿಂದ ಇಮ್ರಾನ್ ಎಲಿಗಾರ, ಎಂಐಎಎಂ ನಿಂದ ಹುಸೇನ್ ಬಿ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿಯ ರಾಮಪ್ಪ ಬಡಿಗೇರಗೆ 47 ಮತ ಪಡೆದು ಮೇಯರ್ ಆಗಿ ಆಯ್ಕೆಯಾದರು. ಕಾಂಗ್ರೆಸ್ ನ ಇಮ್ರಾನ್ ಎಲಿಗಾರ 36, ಎಂಐಎಎಂ ಪಕ್ಷದ ಹುಸೇನ್ ಬಿ ಅವರಿಗೆ ಮೂರು ಮತಗಳನ್ನು ಪಡೆದು ಪರಾಭವಗೊಂಡರು.
ಉಪ ಮಹಾಪೌರ ಸ್ಥಾನಕ್ಕೆ ಬಿಜೆಪಿಯ ದುರ್ಗಮ್ಮ ಬಿಜವಾಡ, ಕಾಂಗ್ರೆಸ್ಸಿನ ಮಂಗಳಮ್ಮ ಹಿರೇಮನಿ ಸ್ಪರ್ಧಿಸಿದ್ದರು. ದುರ್ಗಮ್ಮ ಬಿಜವಾಡ ಅವರಿಗೆ 47 ಮತಗಳನ್ನು ಪಡೆದು ಉಪಮೇಯರ್ ಆಗಿ ಆಯ್ಕೆಯಾದರೆ, ಮಂಗಳಮ್ಮ ಅವರು 36 ಮತಗಳನ್ನು ಪಡೆದು ಪರಾಭವಗೊಂಡರು.
ಒಟ್ಟು 82 ಸದಸ್ಯ ಬಲದ ಪಾಲಿಕೆಯಲ್ಲಿ ಚುನಾವಣೆ ವೇಳೆ ನಾಲ್ವರು ಸದಸ್ಯರು ಗೈರು ಹಾಜರಿದ್ದರೆ, ಮೂವರು ಸದಸ್ಯರು ತಟಸ್ಥರಾಗಿ ಉಳಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ತು ಸದಸ್ಯರಾದ ಎಸ್.ವಿ.ಸಂಕನೂರು, ಪ್ರದೀಪ ಶೆಟ್ಟರ ಮತದಾನದಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ಪ್ರಾದೇಶಿಕ ಆಯಕ್ತ ಎಸ್.ಬಿ.ಶೆಟ್ಟೆಣ್ಣವರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಎಸ್.ಎಸ್.ಬಿರಾದಾರ, ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಉಪಸ್ಥಿತರಿದ್ದರು.
ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಪಾಲಿಕೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ