ಗುಂಟೂರು: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಆಡಳಿತಾರೂಢ ತೆಲುಗು ದೇಶಂ ಪಕ್ಷದ (ಟಿಡಿಪಿ) ಶಾಸಕ ಕೆ. ರಘುರಾಮ ಕೃಷ್ಣರಾಜು ಅವರು ತಮ್ಮ ವಿರುದ್ಧ ಕ್ರಿಮಿನಲ್ “ಸಂಚು” ರೂಪಿಸುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ನಂತರ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ, ಇಬ್ಬರು ಐಪಿಎಸ್ ಅಧಿಕಾರಿಗಳು ಹಾಗೂ ಮತ್ತಿಬ್ಬರು ನಿವೃತ್ತ ಅಧಿಕಾರಿಗಳ ವಿರುದ್ಧ ಆಂಧ್ರ ಪ್ರದೇಶ ಪೊಲೀಸರು ‘ಕೊಲೆ ಯತ್ನ’ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ರಾಜು ಅವರು ಒಂದು ತಿಂಗಳ ಹಿಂದೆಯೇ ಇ-ಮೇಲ್ ಮೂಲಕ ದೂರು ನೀಡಿದ್ದರು. ಕಾನೂನು ಸಲಹೆಗಳನ್ನು ಪಡೆದ ಬಳಿಕ, ಮಾಜಿ ಮುಖ್ಯಮಂತ್ರಿ ಹಾಗೂ ಇತರರ ವಿರುದ್ಧ ಗುರುವಾರ ರಾತ್ರಿ 7ಕ್ಕೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಅಧಿಕಾರಿ ಹೇಳಿದ್ದಾರೆ. ಉಂಡಿ ಕ್ಷೇತ್ರದ ಶಾಸಕ ರಾಜು ತಮ್ಮನ್ನು ‘ಕಸ್ಟಡಿಯಲ್ಲಿಟ್ಟು ಕಿರುಕುಳ ನೀಡಲಾಗಿತ್ತು’ ಎಂದು ಆರೋಪಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಗುಂಟೂರಿನ ನಾಗರಾಮಪಳೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಎಸ್ ಅಧಿಕಾರಿಗಳಾದ ಪಿ.ವಿ. ಸುನೀಲಕುಮಾರ, ಪಿ.ಎಸ್.ಆರ್ ಸೀತಾರಾಮಾಂಜನೇಯುಲು ಮತ್ತು ನಿವೃತ್ತ ಅಧಿಕಾರಿಗಳಾದ ಆರ್. ವಿಜಯ ಪೌಲ್, ಜಿ.ಪ್ರಭಾವತಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
2ನೇ ಕೋವಿಡ್-19ರ ಅಲೆ ಸಂದರ್ಭದಲ್ಲಿ ಕೆ. ರಘುರಾಮ ಕೃಷ್ಣರಾಜು ಅವರನ್ನು ಬಂಧಿಸಲಾಗಿತ್ತು. ತಮ್ಮ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗೂ ಇತರರು ‘ಕ್ರಿಮಿನಲ್ ಸಂಚು’ ನಡೆಸಿದ್ದರು ಎಂದು ಅವರು ಆರೋಪಿಸಿದ್ದಾರೆ.
‘ಆಂಧ್ರ ಪ್ರದೇಶದ ಆಗಿನ ಸರ್ಕಾರ ಸಿಐಡಿ ಅಪರಾಧ ದಳದ (ಸಿಬಿಸಿಐಡಿ) ಮೂಲಕ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಂಡಿತ್ತು. ಯಾವುದೇ ರೀತಿಯ ಕಾನೂನಾತ್ಮಕ ಪ್ರಕ್ರಿಯೆಗಳನ್ನು ನಡೆಸದೆ 2021ರ ಮೇ 14ರಂದು ನನ್ನನ್ನು ಬಂಧಿಸಲಾಗಿತ್ತು. ಪೊಲೀಸ್ ವಾಹನದಲ್ಲಿ ಅಮಾನವೀಯವಾಗಿ ಹಲ್ಲೆ ಮಾಡಲಾಗಿತ್ತು. ಅದೇ ದಿನ ರಾತ್ರಿ ಬಲವಂತವಾಗಿ ಗುಂಟೂರಿಗೆ ಕರೆದೊಯ್ಯಲಾಗಿತ್ತು’ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.
ಬಂಧಿಸುವ ಮೊದಲು “ಕೆಲವು ವಾರಗಳ” ನಾನು ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಮಾನಸಿಕವಾಗಿ ಹಿಂಸಿಸಲಾಗಿದೆ. ನನ್ನನ್ನು ರಾತ್ರಿ 9:30 ರಿಂದ ಮೇ 14, 2021 ಗುಂಟೂರಿನ ಸಿಬಿ-ಸಿಐಡಿ ಕಚೇರಿಯಲ್ಲಿ ಇರಿಸಲಾಗಿತ್ತು. ಓಪನ್ ಹಾರ್ಟ್ ಬೈಪಾಸ್ ಸರ್ಜರಿ ಮಾಡಿದರೂ ನನಗೆ ಔಷಧ ನೀಡಿಲ್ಲ,” ಎಂದು ರಾಜು ಆರೋಪಿಸಿದ್ದಾರೆ.
ಆಗ ಜಗನ್ ಮುಖ್ಯಮಂತ್ರಿಯಾಗಿದ್ದರು. ಸುನೀಲಕುಮಾರ ಸಿಐಡಿ ಮುಖ್ಯಸ್ಥರಾಗಿದ್ದರು. ಪೌಲ್ ಅವರು ಸಿಐಡಿಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಸೀತಾರಾಮಾಂಜನೇಯುಲು ಗುಪ್ತಚರ ವಿಭಾಗದಲ್ಲಿದ್ದು ಹಾಗೂ ಪ್ರಭಾವತಿ ಗುಂಟೂರು ಜಿಲ್ಲಾಸ್ಪತ್ರೆಯ ಅಧೀಕ್ಷಕರಾಗಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ