ಪೋಕ್ಸೊ ಪ್ರಕರಣ: ಯಡಿಯೂರಪ್ಪಗೆ ಕೋರ್ಟ್‌ ಹಾಜರಿಗೆ ವಿನಾಯಿತಿ ನೀಡಿದ ಹೈಕೋರ್ಟ್‌

ಬೆಂಗಳೂರು : ಪೋಕ್ಸೊ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಗೆ ವಿಚಾರಣಾ ನ್ಯಾಯಾಲಯವು ಜುಲೈ 15ಕ್ಕೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.
ಜುಲೈ 6ರಂದು ವಿಚಾರಣಾಧೀನ ನ್ಯಾಯಾಲಯವು ಯಡಿಯೂರಪ್ಪ ಸೇರಿ ನಾಲ್ವರು ಆರೋಪಿಗಳು ಖುದ್ದು ಹಾಜರಾಗಬೇಕು ಎಂದು ಆದೇಶಿಸಿತ್ತು. ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೊ ಪ್ರಕರಣ ರದ್ದುಪಡಿಸುವಂತೆ ಹಾಗೂ ಈ ಪ್ರಕರಣದಲ್ಲಿ ಜಾಮೀನುನೀಡುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳು ಹಾಗೂ ಇದೇ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಅರುಣ ವೈ.ಎಂ. ಅವರು ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ ಅವರು “ಅಡ್ವೊಕೇಟ್‌ ಜನರಲ್‌ ಅವರು ಊರಿನಲ್ಲಿ ಇಲ್ಲ. ಹೀಗಾಗಿ, ವಿಚಾರಣೆ ಮುಂದೂಡಬೇಕು” ಎಂದು ಪೀಠವನ್ನು ಕೋರಿದರು.
ಅರ್ಜಿದಾರ ಯಡಿಯೂರಪ್ಪ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸಿ.ವಿ. ನಾಗೇಶ ಅವರು “ಪ್ರಕರಣ ಇದೇ ಮೊದಲ ಬಾರಿಗೆ ವಿಚಾರಣೆಗೆ ಬರುತ್ತಿಲ್ಲ. ನಮ್ಮ ವಾದ ಆಲಿಸಬೇಕು. ಯಡಿಯೂರಪ್ಪ ವಿರುದ್ಧ ವಿಚಾರಣಾಧೀನ ನ್ಯಾಯಾಲಯವು ಆರೋಪ ಪಟ್ಟಿ ಸ್ವೀಕರಿಸಿ, ಸಂಜ್ಞೇ ಪರಿಗಣಿಸಿ ಖುದ್ದು ಹಾಜರಾಗಲು ಆದೇಶಿಸಿದೆ. ಹೀಗಾಗಿ, ಯಡಿಯೂರಪ್ಪ ಜುಲೈ 15ರಂದು (ಸೋಮವಾರ) ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ ಎಂದು ತಿಳಿಸಿದರು.
ಆಗ ಪೀಠವು “ಯಡಿಯೂರಪ್ಪ ಅವರಿಗೆ ಮಧ್ಯಂತರ ಆದೇಶದ ಮೂಲಕ ರಕ್ಷಣೆ ಒದಗಿಸಲಾಗಿದೆ. ಹಾಲಿ ಪ್ರಕರಣವನ್ನು ಹೈಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಳ್ಳುವವರೆಗೆ ಪೋಕ್ಸೊ ನ್ಯಾಯಾಲಯವು ವಿಚಾರಣೆಗೆ ಯಡಿಯೂರಪ್ಪ ಅವರ ಖುದ್ದು ಹಾಜರಿಗೆ ವಿನಾಯಿತಿ ನೀಡಬೇಕು ಎಂದು ಆದೇಶಿಸಿ, ವಿಚಾರಣೆಯನ್ನು ಜುಲೈ 26ಕ್ಕೆ ಮುಂದೂಡಿತು.

ಪ್ರಮುಖ ಸುದ್ದಿ :-   ಜೈಲಿನಲ್ಲಿ ಸುಹಾಸ ಶೆಟ್ಟಿ ಕೊಲೆಯ ಪ್ರಮುಖ ಆರೋಪಿ ಮೇಲೆ ಸಹಕೈದಿಗಳಿಂದ ಹಲ್ಲೆ ಯತ್ನ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement