ಪಣಜಿ: ಬಿಜೆಪಿ ಭಿನ್ನರೀತಿಯ ಪಕ್ಷವಾಗಿದೆ. ಅದಕ್ಕಾಗಿಯೇ ಅದು ಮತದಾರರ ವಿಶ್ವಾಸವನ್ನು ಪದೇ ಪದೇ ಗೆದ್ದಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪಣಜಿಯಲ್ಲಿ ಹೇಳಿದ್ದಾರೆ. ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಮಾಡಿದ ತಪ್ಪುಗಳನ್ನು ನಾವೂ ಪುನರಾವರ್ತಿಸಿದರೆ ಜನರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪಕ್ಷದ ನಾಯಕರಿಗೆ ಮುನ್ನೆಚ್ಚರಿಕೆ ನೀಡಿದರು.
ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸದಾನಂದ ತಾನವಾಡೆ ಮತ್ತು ಮುಖ್ಯಮಂತ್ರಿ ಪ್ರಮೋದ ಸಾವಂತ್ ಉಪಸ್ಥಿತರಿದ್ದ ಪಣಜಿ ಬಳಿ ನಡೆದ ಗೋವಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, “ನಾವು ಕಾಂಗ್ರೆಸ್ ಮಾಡಿದ ತಪ್ಪುಗಳನ್ನೇ ಮುಂದುವರಿಸಿದರೆ, ಅವರ ನಿರ್ಗಮನ ಮತ್ತು ನಮ್ಮ ಪ್ರವೇಶದಿಂದ ಯಾವುದೇ ಪ್ರಯೋಜನವಿಲ್ಲ” ಎಂದು ಗಡ್ಕರಿ ಮಾರ್ಮಿಕವಾಗಿ ಹೇಳಿದರು. ಬಿಜೆಪಿ ಲೋಕಸಭೆಯಲ್ಲಿ ತನ್ನದೇ ಸ್ವಂತ ಬಲದಲ್ಲಿ ಬಹುಮತ ಗಳಿಸಲು ವಿಫಲವಾದ ಒಂದು ತಿಂಗಳ ನಂತರ ನಿತಿನ್ ಗಡ್ಕರಿ ಅವರ ಹೇಳಿಕೆ ಬಂದಿದೆ.
ತಮ್ಮ 40 ನಿಮಿಷಗಳ ಭಾಷಣದಲ್ಲಿ, ಮಾಜಿ ಉಪಪ್ರಧಾನಿ ಎಲ್‌ಕೆ ಅಡ್ವಾಣಿ ಅವರ “ಬಿಜೆಪಿಯು ವಿಭಿನ್ನವಾಗಿರುವ ಪಕ್ಷ” ಎಂಬ ಹೇಳಿಕೆಯನ್ನು ನೆನಪಿಸಿಕೊಂಡರು. “ನಾವು ವಿಭಿನ್ನವಾಗಿರುವ ಪಕ್ಷ ಎಂದು ಅಡ್ವಾಣಿಜಿ ಹೇಳುತ್ತಿದ್ದರು. ನಾವು ಇತರ ಪಕ್ಷಗಳಿಗಿಂತ ಎಷ್ಟು ವಿಭಿನ್ನವಾಗಿದ್ದೇವೆ ಎಂಬುದನ್ನು ನಾವು ಅರ್ಥಮಾಡಿಕೊಂಡು ಮುನ್ನಡೆಯಬೇಕು” ಎಂದು ಗಡ್ಕರಿ ಹೇಳಿದರು.
ಕಾಂಗ್ರೆಸ್ ಮಾಡಿದ ತಪ್ಪುಗಳಿಂದಾಗಿ ಜನರು ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ ಮತ್ತು ಹೀಗಾಗಿ ನಾವೂ ಅದೇ ತಪ್ಪುಗಳನ್ನು ಮಾಡದಂತೆ ಅವರು ಎಚ್ಚರಿಸಿದ್ದಾರೆ.
ಅದಕ್ಕಾಗಿಯೇ ಮುಂದಿನ ದಿನಗಳಲ್ಲಿ ರಾಜಕೀಯವು ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳನ್ನು ತರುವ ಸಾಧನ ಎಂಬುದನ್ನು ಪಕ್ಷದ ಕಾರ್ಯಕರ್ತರು ತಿಳಿದುಕೊಳ್ಳಬೇಕು. ನಾವು ಭ್ರಷ್ಟಾಚಾರ ಮುಕ್ತ ದೇಶವನ್ನು ನಿರ್ಮಿಸಬೇಕಾಗಿದೆ ಮತ್ತು ಅದಕ್ಕಾಗಿ ನಾವು ಯೋಜನೆಯನ್ನು ಹೊಂದಿರಬೇಕು” ಎಂದು ಅವರು ಒತ್ತಿ ಹೇಳಿದರು.
ಮಹಾರಾಷ್ಟ್ರದ ರಾಜಕೀಯವನ್ನು ಉಲ್ಲೇಖಿಸಿದ ಗಡ್ಕರಿ, ನನ್ನ ತವರು ರಾಜ್ಯ ಮಹಾರಾಷ್ಟ್ರದಲ್ಲಿ ಜಾತಿ ರಾಜಕಾರಣ ಮಾಡುವ ಪ್ರವೃತ್ತಿ ಇದೆ ಎಂದು ಪ್ರತಿಪಾದಿಸಿದರು. “ನಾನು ಈ ಪ್ರವೃತ್ತಿಯನ್ನು ಅನುಸರಿಸದೇ ಇರಲು ನಿರ್ಧರಿಸಿದ್ದೇನೆ. ನಾನು ಜಾತಿ ರಾಜಕಾರಣದಲ್ಲಿ ತೊಡಗುವುದಿಲ್ಲ ಎಂದು ನಾನು ಜನರಿಗೆ ಹೇಳಿದ್ದೇನೆ. ಜೋ ಕರೇಗಾ ಜಾತ್ ಕಿ ಬಾತ್, ಉಸ್ಕೋ ಪಡೆಗಿ ಕಸ್ಕೆ ಲಾತ್ (ಜಾತಿಗಳ ಬಗ್ಗೆ ಮಾತನಾಡುವವರನ್ನು ಅಧಿಕಾರದಿಂದ ಹೊರಹಾಕಲಾಗುತ್ತದೆ. ಒಬ್ಬ ವ್ಯಕ್ತಿಯನ್ನು ಅವನು ಹೊಂದಿರುವ ಮೌಲ್ಯಗಳಿಂದ ಗುರುತಿಸಲಾಗುತ್ತದೆ ಮತ್ತು ಅವನ ಜಾತಿಯಿಂದಲ್ಲ ಎಂದು ಹೇಳಿದರು.
2027 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅಧಿಕಾರವನ್ನು ಉಳಿಸಿಕೊಳ್ಳಲು ಪ್ರತಿ ಕ್ಷೇತ್ರಕ್ಕೂ ಭೇಟಿ ನೀಡಿ ಸಂಘಟನೆಯನ್ನು ಬಲಪಡಿಸುವಂತೆ ಗೋವಾ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ