ಚೆನ್ನೈ: ತಮಿಳುನಾಡು ಬಿಎಸ್ ಪಿ ರಾಜ್ಯಾಧ್ಯಕ್ಷ ಕೆ.ಆರ್ಮ್ ಸ್ಟ್ರಾಂಗ್ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಎನ್ ಕೌಂಟರನಲ್ಲಿ ಸಾಯಿಸಿದ್ದಾರೆ.
ಆರ್ಮ್ ಸ್ಟ್ರಾಂಗ್ ಅವರನ್ನು ಹತ್ಯೆ ಮಾಡಲು ಬಳಸಿದ್ದ ಆಯುಧಗಳನ್ನು ವಶಕ್ಕೆ ಪಡೆಯಲೆಂದು ಪೊಲೀಸರು ಆರೋಪಿ ಕೆ.ತಿರುವೆಂಗಡಂನೊಂದಿಗೆ ಮಾಧವರಂ ಬಳಿಯ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆತ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಪೊಲೀಸರು ತಿರುವೆಂಗಡಂ ಮೇಲೆ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆರೋಪಿಯನ್ನು ಅಆಸ್ಪತ್ರೆಗೆ ಒಯ್ಯುವಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತ ಆರೋಪಿ ತಿರುವೆಂಗಡಂ ಬಂಧಿತ 11 ಆರೋಪಿಗಳಲ್ಲಿ ಒಬ್ಬನಾಗಿದ್ದ. ಬಿಎಸ್ಪಿ ರಾಜ್ಯಾಧ್ಯಕ್ಷ ಆರ್ಮ್ ಸ್ಟ್ರಾಂಗ್ ಅವರ ಕೊಲೆಗೂ ಮುನ್ನ ಹಲವು ದಿನಗಳಿಂದ ಅವರ ಮೇಲೆ ತಿರುವೆಂಗಡಂ ನಿಗಾ ಇಟ್ಟಿದ್ದ. ಅಲ್ಲದೇ ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಜುಲೈ 5ರಂದು ಚೆನ್ನೈನ ಪೆರಂಬೂರ್ ಪ್ರದೇಶದಲ್ಲಿನ ನಿವಾಸದ ಬಳಿ ಆರು ಅಪರಿಚಿತರ ಗುಂಪು ಆರ್ಮ್ ಸ್ಟ್ರಾಂಗ್ ಅವರ ಮೇಲೆ ಮಾರಣಂತಿಕ ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ