ಹಾಸನ: ದೇವಸ್ಥಾನಕ್ಕೆ ಹೋದಾಗ ಕಾಲು ಜಾರಿ ಬಿದ್ದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪಕ್ಕೆಲುಬಿಗೆ ಪೆಟ್ಟಾಗಿದ್ದು, ಚಿಕಿತ್ಸೆಗಾಗಿ ಹೊಳೆನರಸೀಪುರದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಏಕಾದಶಿ ಪ್ರಯುಕ್ತ ಉಪವಾಸವಿದ್ದ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಅವರು ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ದೇವೇಶ್ವರ ದೇವಾಲಯಕ್ಕೆ ತೆರಳಿದ್ದರು.
ಹರದನಹಳ್ಳಿಯಲ್ಲಿ ಪೂಜೆಯ ಬಳಿಕ ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಎಚ್.ಡಿ.ರೇವಣ್ಣ ಹೊರಟಿದ್ದರು ಎನ್ನಲಾಗಿದ್ದು, ಈ ವೇಳೆ ಕಾಲು ಜಾರಿ ಬಿದ್ದು ಪಕ್ಕೆಲುಬಿಗೆ ಪೆಟ್ಟಾಗಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಹೊಳೆನರಸೀಪುರದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಪವಾಸ ಹಾಗೂ ತೀವ್ರ ಪಕ್ಕೆಲುಬು ನೋವಿನ ಕಾರಣ ಸುಸ್ತಾಗಿರುವ ಎಚ್.ಡಿ.ರೇವಣ್ಣ ಅವರಿಗೆ ಹೊಳೆನರಸೀಪುರದ ತಾಲೂಕು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಾಭ್ಯವಾಗಬೇಕಿದೆ.
ನಿಮ್ಮ ಕಾಮೆಂಟ್ ಬರೆಯಿರಿ