ಗುರುವಿನ ಗುಲಾಮನಾಗುವ ತನಕ…: ಗುರುವನ್ನು ಆರಾಧಿಸುವ ಗುರುಪೂರ್ಣಿಮೆ

(ಇಂದು ಗುರು ಪೂರ್ಣಿಮೆಯನ್ನು (೨೧-೦೭-೨೦೨೪) ಆಚರಿಸಲಾಗುತ್ತಿದೆ)
ಗುರು ಪೂರ್ಣಿಮೆಯನ್ನು ಭಾರತದಲ್ಲಿ ಅಧ್ಯಾತ್ಮಿಕ ಅಥವಾ ಶೈಕ್ಷಣಿಕ ಗುರುಗಳ ಗೌರವಾರ್ಥವಾಗಿ, ನಮನ ಸಲ್ಲಿಸಲು ಮತ್ತು ಗೌರವವನ್ನು ತೋರಿಸಲು ಆಚರಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗುರುಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಪುರಾತನ ನಾಗರಿಕತೆಯಾಗಲಿ ಅಥವಾ ಆಧುನಿಕ ಯುಗವೇ ಆಗಿರಲಿ, ಸಮಾಜವನ್ನು ಕಟ್ಟುವಲ್ಲಿ ಗುರುಗಳ ಪಾತ್ರ ಮಹತ್ವದ್ದಾಗಿದೆ. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ನಾಲ್ಕು ವೇದಗಳನ್ನು ಗುರು ವ್ಯಾಸರು ಬರೆದಿದ್ದಾರೆ ಎಂಬುದು ನಂಬಿಕೆ. ಈ ಗುರುಪೂರ್ಣಿಮೆಯನ್ನು ನಮ್ಮ ಭವಿಷ್ಯವನ್ನು ನಿರ್ಮಿಸುವ ಶಿಕ್ಷಕರಿಗೆ ಮತ್ತು ಮಾರ್ಗದರ್ಶಕರಿಗೆ ಸಪರ್ಮಿಸಲಾಗಿದೆ.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತಿದ್ದು, ಅಂತೆಯೇ ಭಾರತೀಯ ಸಂಪ್ರದಾಯದಲ್ಲಿ ಗುರುವಿಗೆ ದೇವರ ಸ್ಥಾನಕ್ಕಿಂತಲೂ ಒಂದು ಸ್ಥಾನ ಹೆಚ್ಚಿಗೆ ನೀಡಲಾಗಿದೆ. ಹಿಂದುಗಳ ಧಾರ್ಮಿಕ ಆಚರಣೆ ಗುರುಪೂರ್ಣಿಮೆಯನ್ನು ʼವ್ಯಾಸ ಪೂರ್ಣಿಮೆʼ ಎಂದು ಕರೆಯಲಾಗುತ್ತದೆ. ಈ ದಿನವು ಮಹಾಭಾರತವನ್ನು ರಚಿಸಿದ ವೇದವ್ಯಾಸರ ಜನ್ಮದಿನವೂ ಅಹುದು.  ಆಷಾಢ ಮಾಸದ ಪೌರ್ಣಿಮೆಯಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ.
ಗುರು ಪೂರ್ಣಿಮೆ ಎಂಬುದು ಆಧ್ಯಾತ್ಮಿಕ ಗುರುಗಳನ್ನು ಸ್ತುತಿಸುವ ಉತ್ಸವ. ಈ ದಿನವನ್ನು ಭಾರತ, ನೇಪಾಳ ಭೂತಾನ ಮುಂತಾದ ದೇಶಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ವಿಶೇಷವಾಗಿ ಹಿಂದೂಗಳು, ಜೈನರು ಹಾಗೂ ಬೌದ್ಧರು ಆಚರಿಸುತ್ತಾರೆ.
ಗುರು ಮತ್ತು ಪೂರ್ಣಿಮೆ ಎಂಬ ಎರಡು ಪದಗಳ ಸಂಯೋಜನೆಯೇ ಗುರು ಪೂರ್ಣಿಮೆಯಾಗಿದೆ. ಗುರು ಎಂಬುದು ಸಂಸ್ಕೃತದ ಮೂಲ ಪದಗಳಾದ ಗು ಮತ್ತು ರು ಗಳಿಂದ ಬಂದಿದೆ. ಗು ಎಂದರೆ ಕತ್ತಲೆ ಅಥವಾ ಅಜ್ಞಾನ  ರು ಎಂದರೆ ಬಿಡಿಸುವವನು ಎಂದಾಗುತ್ತದೆ. ಅಂದರೆ ಕತ್ತಲೆ ಅಥವಾ ಅಜ್ಞಾನದಿಂದ ಮುಕ್ತಿ ಕೊಡಿಸುವವರು ಗುರು ಎಂದು ಅರ್ಥೈಸಲಾಗುತ್ತಿದೆ.
ಗುರು ಪೂರ್ಣಿಮೆಯ ಮೂಲ :
ಪೌರಾಣಿಕ ದಂತ ಕಥೆಗಳ ಪ್ರಕಾರ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವ್ಯಾಸರು ಈ ದಿನದಂದು ಜನಿಸಿದ್ದರು. ಜೊತೆಗೆ ಮಹಾಭಾರತವನ್ನು ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮತ್ತು ವೇದಗಳನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಿದ ಹಿರಿಮೆ ಇವರದು. ಅಂತೆಯೇ ಅವರ ಮಹತ್ವ ಹಾಗೂ ಕೊಡುಗೆಗಳನ್ನು ಸಾರುವ ದಿನವೇ ಈ ಗುರು ಪೂರ್ಣಿಮೆಯ ಆಚರಣೆಯ ಮೂಲವಾಗಿದೆ.  ಜ್ಞಾನವನ್ನು ಪಸರಿಸುವ  ಮೂಲಕ ಸಮಾಜದ ಕತ್ತಲೆಯನ್ನು ತೊಳೆಯುವಲ್ಲಿ ತಮ್ಮ ಶಿಷ್ಯರನ್ನು ಜ್ಞಾನದ ಹಾದಿಯಲ್ಲಿ ಮುನ್ನಡಯುವಂತೆ ಮಾರ್ಗದರ್ಶನ ಮಾಡುವ ಪ್ರತಿಯೊಬ್ಬ ಗುರುವಿಗೆ ಹಾಗೂ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೂ ಹೌದು.
ಆಚರಣೆಯ ಹಿಂದಿನ ಇತರ ಸಂಗತಿಗಳು..
•ಸಾರನಾಥದಲ್ಲಿ ಈ ದಿನದಂದು ಗೌತಮ ಬುದ್ಧ ತನ್ನ ಮೊದಲ ಧರ್ಮೊಪದೇಶವನ್ನು ಐದು ಭಿಕ್ಷುಗಳಿಗೆ ನೀಡಿದ ನೆನಪಿಗಾಗಿ ಬೌದ್ಧರು ಈ ದಿನವನ್ನು ಆಚರಿಸುತ್ತಾರೆ.
• ಯೋಗ ಸಂಪ್ರದಾಯದ ಪ್ರಕಾರ ಈ ದಿನವು ಶಿವನು ಸಪ್ತ ಋಷಿಗಳಿಗೆ ಯೋಗವನ್ನು ಕಲಿಸಲು ಪ್ರಾರಂಭಿಸುವ ಜೊತೆಗೆ ಮೊದಲ ಗುರುವಾದ ಕ್ಷಣವನ್ನು ಸೂಚಿಸುತ್ತದೆ.
• ಗುರು ಶಿಷ್ಯ ಪರಂಪರೆಯ ಅನುಯಾಯಿಗಳೆಲ್ಲರೂ ಈ ಪವಿತ್ರ ದಿನವನ್ನು ಆಚರಿಸುತ್ತಾರೆ.
• ಜೈನ ಸಂಪ್ರದಾಯದಲ್ಲಿ ಈ ದಿನವನ್ನು ಟ್ರಿನೋಕ್ ಗುಹಾ ಪೂರ್ಣಿಮಾ ಎಂದು ಕರೆಯುಲಾಗುತ್ತದೆ.
ಗತದಲ್ಲಿ ನಾವು ಸಾಧಿಸಿರುವ ಎಲ್ಲದ್ದರ ಬಗ್ಗೆ ಕೃತಜ್ಞರಾಗುವತ್ತ ಮುಂಬರುವ ವರುಷಗಳಲ್ಲಿ ನಾವು ಸಾಧಿಸಲು ಬಯಸಿರುವುದರ ಬಗ್ಗೆ ಮತ್ತೆ ಸಂಕಲ್ಪ ಮಾಡುವಂತಹ ದಿನವಾದ ಈ ಗುರು ಪೂರ್ಣಿಮೆಯು ಗುರುಗಳಿಗೆ ಕೃತಜ್ಞತೆ ಸಲ್ಲಿಸಿ ಕೃತಾರ್ಥರಾಗಿ ಮುನ್ನಡೆಯುವ ದಿನವಾಗಿದೆ.
ಸಂತರು, ಶರಣರು ಮಹಾತ್ಮರು, ಶ್ರೀ ಸಿದ್ಧಾರೂಢರು, ಕಬೀರದಾಸರು, ಶಿಶುನಾಳ ಶರೀಫರು ಮುಂತಾದವರು ಗುರುಗಳ ಮಹಿಮೆಯನ್ನು ಸಾರುತ್ತಾ ಬಂದಿದ್ದಾರೆ. ಎಲ್ಲರ ಅಜ್ಞಾನ ಹೊಡದೊಡಿಸಿ ಮುನ್ನಡೆಸುತ್ತಿರುವ ಎಲ್ಲ ಗುರುಗಳಿಗೂ ನಮಿಸೋಣ.
-ಬಿ. ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement