ನವದೆಹಲಿ: ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆಗಳ (ಎಂಎಸ್ಎಂಇ) ಬೆಳವಣಿಗೆಗಾಗಿ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರದ 2024-25ರ ಬಜೆಟ್ ಮಂಡನೆ ವೇಳೆ ಮಾತನಾಡಿದ ಅವರು, ದೇಶದಲ್ಲಿ ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಗಾತ್ರದ ಕೈಗಾರಿಕೆಗಳ ಬೆಳವಣಿಗೆ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೆಲವು ಯೋಜನೆಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಬಜೆಟ್‌ನಲ್ಲಿ ಎಂಎಸ್‌ಎಂಇಗಳು ಮತ್ತು ಉತ್ಪಾದನೆಗೆ ವಿಶೇಷ ಗಮನ ನೀಡಲಾಗಿದೆ. ಮುದ್ರಾ ಯೋಜನೆಯಡಿ, ಎಂಎಸ್ಎಂಇ ವಲಯದ ಕಂಪನಿಗಳಿಗೆ ನೀಡಲಾಗುತ್ತಿದ್ದ ಸಾಲದ ಮೊತ್ತವನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅದರಿಂದ, ಎಂಎಸ್ಎಂಇ ಕಂಪನಿಗಳಿಗೆ ಮತ್ತಷ್ಟು ಬೆಳವಣಿಗೆ ಕಾಣಲು ಹಾಗೂ ಹೊಸ ಕಂಪನಿಗಳ ಸ್ಥಾಪನೆಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ. ಎಂಎಸ್ಎಂಇಗಳು ತಮ್ಮ ಒತ್ತಡದ ಅವಧಿಯಲ್ಲಿ ಬ್ಯಾಂಕ್ ಸಾಲವನ್ನು ಮುಂದುವರಿಸಲು ಅನುಕೂಲವಾಗುವಂತೆ ಬಜೆಟ್‌ನಲ್ಲಿ ಹೊಸ ವ್ಯವಸ್ಥೆಗಳನ್ನು ಘೋಷಿಸಲಾಗಿದೆ.
ಅಲ್ಲದೆ, ಎಂಎಸ್ಎಂಇ ವಲಯದ ಕಂಪನಿಗಳು ಹೊಸ ಯಂತ್ರ ಹಾಗೂ ಹೊಸ ಪರಿಕರಗಳನ್ನು ಖರೀದಿಸಲು ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ಗಳನ್ನು ಪಡೆಯಲು ಯಾವುದೇ ಗ್ಯಾರಂಟಿಗಳನ್ನು ನೀಡದೆಯೂ ಪಡೆಯುವಂಥ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗುವುದು. ಇದಕ್ಕಾಗಿ ದೇಶದ ಎಂಎಸ್ಎಂಇ ವಲಯಕ್ಕೆ 100 ಕೋಟಿ ರೂ. ಗ್ಯಾರಂಟಿ ಮೊತ್ತವನ್ನು ನಿಗದಿಪಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಉದ್ಯೋಗ ಸೃಷ್ಟಿಗೆ ಟಾನಿಕ್
ಉದ್ಯೋಗ ಸೃಷ್ಟಿಗೆ ಮೂರು ಕೌಶಲ್ಯ ಯೋಜನೆಗಳ ಜಾರಿ
ಮುದ್ರಾ ಯೋಜನೆ ಸಾಲ 10 ಲಕ್ಷ ರೂ. ನಿಂದ 20 ಲಕ್ಷ ರೂ.ಗೆ ಏರಿಕೆ
ಸ್ಟ್ರೀಟ್ ಫುಡ್ ಹಬ್‌ಗಳ ಅಭಿವೃದ್ಧಿಗೆ ನಿರ್ಧಾರ
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ನೆರವು
12 ಕೈಗಾರಿಕಾ ಪಾರ್ಕ್
ಉದ್ಯೋಗ ಸೃಷ್ಟಿಗೆ ಶಿಪ್ಪಿಂಗ್ ಉದ್ಯಮಕ್ಕೆ ಒತ್ತು, ಕೈಗಾರಿಕಾ ನೌಕರರಿಗೆ ಡಾರ್ಮೆಂಟರಿ ರೀತಿ ಬಾಡಿಗೆ ಮನೆ, ಪಿಪಿಪಿ ಮಾದರಿಯಲ್ಲಿ ಬಾಡಿಗೆ ಮನೆಗಳ ನಿರ್ಮಾಣ, 12 ಕೈಗಾರಿಕಾ ಪಾರ್ಕ್‌ಗಳ ಸ್ಥಾಪನೆಯ ಘೋಷಣೆ ಮಾಡಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಿದೆ. ಇದೇ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ಸಂಬಂಧಿಸಿದ ಮೂರು ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಯನ್ನು ಘೋಷಿಸಿದ್ದಾರೆ. ಹೊಸ ಉದ್ಯೋಗಿಗಳು ಅಂದರೆ ಫ್ರೆಷರ್‌ಗೆ ಒಂದು ತಿಂಗಳ ವೇತನ, ಉತ್ಪಾದಕ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ಹಾಗೂ ಕಂಪನಿಗಳಿಗೆ ಹಣಕಾಸಿನ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.
ಯುವಜನತೆಗೆ ಗುಡ್‌ನ್ಯೂಸ್
ಮೊದಲ ಬಾರಿಗೆ ಕೆಲಸಕ್ಕೆ ಸೇರುವ ಉದ್ಯೋಗಾಕಾಂಕ್ಷಿಗಳಿಗೆ ಎರಡು ವರ್ಷಗಳವರೆಗೆ ಸರ್ಕಾರವು ಪ್ರತಿ ತಿಂಗಳು 300 ರೂಪಾಯಿಗಳ ಹೆಚ್ಚುವರಿ ಪಿಎಫ್ ನೀಡುತ್ತದೆ.
ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು 10 ಲಕ್ಷ ರೂ.ವರೆಗೆ ಅಸುರಕ್ಷಿತ ಶಿಕ್ಷಣ ಸಾಲ ಸೌಲಭ್ಯ ನೀಡಲಾಗುತ್ತದೆ. ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಕೇಂದ್ರ ಸರ್ಕಾರವು 4.1 ಕೋಟಿ ಯುವಕರಿಗೆ ಉದ್ಯೋಗಕ್ಕಾಗಿ ಐದು ಯೋಜನೆಗಳನ್ನು ತರಲಿದೆ. ಸರಕಾರ ಮುಂಬರುವ 5 ವರ್ಷಗಳಲ್ಲಿ 2 ಲಕ್ಷ ಕೋಟಿ ರೂಪಾಯಿ ನೀಡಲಿದೆಮುಂದಿನ 5 ವರ್ಷಗಳಲ್ಲಿ 1 ಕೋಟಿ ಯುವಜನರಿಗೆ ಸರ್ಕಾರ ಇಂಟರ್ನ್‌ಶಿಪ್ ನೀಡಲಿದೆ. ಒಂದು ವರ್ಷದ ಇಂಟರ್ನ್‌ಶಿಪ್‌ನಲ್ಲಿ ಪ್ರತಿ ತಿಂಗಳು 5000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ.
ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು…
ಬಿಹಾರದ ವಿಷ್ಣುಪಾದ ದೇವಾಲಯವನ್ನು ಕಾಶಿ ವಿಶ್ವನಾಥ ದೇವಾಯಲದ ಕಾರಿಡಾರ್ ರೀತಿ ಮತ್ತು ಮಹಾಬೋಧಿ ದೇವಾಲಯ ಕಾರಿಡಾರ್ ಅನ್ನು ವಿಶ್ವ ದರ್ಜೆಯ ಯಾತ್ರಿಗಳು ಮತ್ತು ಪ್ರವಾಸಿ ತಾಣಗಳಾಗಿ ಪರಿವರ್ತಿಸುವ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಪ್ರಾಚೀನ ಭಾರತದ ಪ್ರಖ್ಯಾತ ವಿಶ್ವವಿದ್ಯಾಲಯ ನಳಂದವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಹಾಗೂ ನಳಂದ ವಿಶ್ವವಿದ್ಯಾನಿಲಯದ ವೈಭವವನ್ನು ಪುನರುಜ್ಜೀವನಗೊಳಿಸಲಾಗುವುದು ಎಂದು ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದರು.
ಕಾಶಿ ವಿಶ್ವನಾಥ ದೇವಾಯಲದ ಕಾರಿಡಾರ್ ರೀತಿ ಬಿಹಾರದ ವಿಷ್ಣುಪಾದ ದೇವಾಲಯದ ಅಭಿವೃದ್ಧಿ
ಮಹಾಬೋಧಿ ದೇವಾಲಯ ಕಾರಿಡಾರ್ ಅಭಿವೃದ್ಧಿ
ವಿಶ್ವದರ್ಜೆಯ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಗೆ ಹೆಜ್ಜೆ
ಐದು ಕೋಟಿ ಆದಿವಾಸಿಗಳಿಗೆ ಸುಧಾರಿತ ಗ್ರಾಮ ಅಭಿಯಾನ
ಬುಡಕಟ್ಟು ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಧಾನ ಮಂತ್ರಿ ಬುಡಕಟ್ಟು ಉನ್ನತ ಗ್ರಾಮ ಅಭಿಯಾನವನ್ನು ಪ್ರಾರಂಭಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಈ ಯೋಜನೆಯಿಂದ ಬುಡಕಟ್ಟು ಪ್ರಾಬಲ್ಯದ ಹಳ್ಳಿಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಬುಡಕಟ್ಟು ಪ್ರಾಬಲ್ಯದ 63,000 ಗ್ರಾಮಗಳು ವ್ಯಾಪ್ತಿಗೆ ಬರಲಿದ್ದು, 5 ಕೋಟಿ ಬುಡಕಟ್ಟು ಜನರಿಗೆ ಅನುಕೂಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ