ಒಂಬತ್ತು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ; ಮೈಸೂರಿನ ವಿಜಯಶಂಕರ ಮೇಘಾಲಯದ ನೂತನ ರಾಜ್ಯಪಾಲ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ತಡರಾತ್ರಿ ಒಂಬತ್ತು ರಾಜ್ಯಗಳಿಗೆ ಗವರ್ನರ್‌ಗಳನ್ನು ನೇಮಿಸಿದ್ದಾರೆ. ಅವರ ನೇಮಕಾತಿಯ ದಿನಾಂಕಗಳು ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುತ್ತವೆ ಎಂದು ಹೇಳಿದ್ದಾರೆ.
ಮೈಸೂರಿನ ಮಾಜಿ ಲೋಕಸಭಾ ಸದಸ್ಯ ಸಿ.ಎಚ್. ವಿಜಯಶಂಕರ ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಅವರು ಹುಣಸೂರು ಕ್ಷೇತ್ರದ ಶಾಸಕ ಹಾಗೂ ಮೈಸೂರಿನ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಿಎಚ್​ ವಿಜಯ್​ ಶಂಕರ್​ ಅವರು ರಾಣೆ ಬೆನ್ನೂರು ಮೂಲದವರಾಗಿದ್ದು, 1994ರಿಂದ 98ರವರೆಗೆ ಮೊದಲ ಬಾರಿಗೆ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು. ಬಳಿಕ 1998 ಹಾಗೂ 2004ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. 2010ರಿಂದ 16ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು, 2010ರಲ್ಲಿ ಕರ್ನಾಟಕ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಸತತ ಆರು ಬಾರಿ ಗೆದ್ದ ನಂತರ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬರೇಲಿಯಿಂದ ಸ್ಪರ್ಧಿಸಲು ಟಿಕೆಟ್ ನೀಡದ ಹಿರಿಯ ಬಿಜೆಪಿ ನಾಯಕ ಸಂತೋಷ ಗಂಗ್ವಾರ್ ಅವರನ್ನು ಜಾರ್ಖಂಡ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ಅಸ್ಸಾಂನ ಮಾಜಿ ಲೋಕಸಭಾ ಸಂಸದ ರಾಮೆನ್ ದೇಕಾ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಸ್ಪೀಕರ್ ಮತ್ತು ಬಿಜೆಪಿ ನಾಯಕ ಹರಿಭಾವು ಕಿಶನ್‌ರಾವ್ ಬಾಗ್ಡೆ ಅವರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ತ್ರಿಪುರಾದ ಮಾಜಿ ಉಪ ಮುಖ್ಯಮಂತ್ರಿ ಜಿಷ್ಣು ದೇವ ವರ್ಮಾ ಅವರನ್ನು ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ರಾಜಸ್ಥಾನದ ಹಿರಿಯ ಬಿಜೆಪಿ ನಾಯಕ, ರಾಜ್ಯಸಭೆಯ ಮಾಜಿ ಸದಸ್ಯ ಒ.ಪಿ. ಮಾಥುರ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
2013 ರಿಂದ 2014 ರವರೆಗೆ ಗುಜರಾತ್‌ನಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮುಖ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ನಿವೃತ್ತ ಐಎಎಸ್ ಅಧಿಕಾರಿ ಕೆ ಕೈಲಾಶನಾಥನ್ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ.

ಪ್ರಮುಖ ಸುದ್ದಿ :-   ತನ್ನ ಬಿಟ್ಟು ಬೇರೊಬ್ಬಳನ್ನು ಮದುವೆಯಾದ ವ್ಯಕ್ತಿ ಸಿಲುಕಿಸಲು 21 ಸಲ ಬಾಂಬ್ ಬೆದರಿಕೆ ಹಾಕಿದ್ದ ಮಹಿಳಾ ರೊಬೊಟಿಕ್ಸ್ ಎಂಜಿನಿಯರ್ ಬಂಧನ...!

ತೆಲಂಗಾಣದ ಹೆಚ್ಚುವರಿ ಉಸ್ತುವಾರಿ ಹೊಂದಿರುವ ಜಾರ್ಖಂಡ್‌ನ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಈಗ ಬಿಜೆಪಿಗೆ ನಿರ್ಣಾಯಕ ರಾಜ್ಯವಾದ ಮಹಾರಾಷ್ಟ್ರದ ರಾಜ್ಯಪಾಲರಾಗಲಿದ್ದಾರೆ. ಕೊಯಮತ್ತೂರಿನಿಂದ ಲೋಕಸಭೆಗೆ ಎರಡು ಬಾರಿ ಆಯ್ಕೆಯಾದ ರಾಧಾಕೃಷ್ಣನ್ ಅವರು ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷರಾಗಿದ್ದಾರೆ.
ಭಾರತದ ರಾಷ್ಟ್ರಪತಿಗಳು ಪಂಜಾಬ್‌ನ ಗವರ್ನರ್ ಮತ್ತು ಚಂಡೀಗಢದ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯಾಗಿ ಬನ್ವಾರಿಲಾಲ್ ಪುರೋಹಿತ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಅಸ್ಸಾಂನ ರಾಜ್ಯಪಾಲರಾದ ಗುಲಾಬ್ ಚಂದ್ ಕಟಾರಿಯಾ ಅವರನ್ನು ಪಂಜಾಬ್‌ನ ರಾಜ್ಯಪಾಲರಾಗಿ ಮತ್ತು ಚಂಡೀಗಢದ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಬಿಜೆಪಿಯ ಹಿರಿಯ ನಾಯಕ ಕಟಾರಿಯಾ ಈ ಹಿಂದೆ ರಾಜಸ್ಥಾನದಲ್ಲಿ ಸಚಿವರಾಗಿದ್ದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement