ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಶಾಂತಿ ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ (Puneeth Kerehalli) 14 ದಿನ ನ್ಯಾಯಾಂಗ ಬಂಧನಕ್ಕೆ 5ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.
ಶನಿವಾರ ಕಾಟನ್ ಪೇಟೆ ಪೊಲೀಸರ ವಿಚಾರಣೆ ವೇಳೆ ಹೊಟ್ಟೆ ನೋವಿನಿಂದ ಏಕಾಏಕಿ ಕುಸಿದು ಬಿದ್ದಿದ್ದ ಪುನೀತ್ ಕೆರೆಹಳ್ಳಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ವಿಕ್ಟೋರಿಯಾ ಆಸ್ಪತ್ರೆಯಿಂದ ಕರೆತಂದಿದ್ದ ಪೊಲೀಸರು ಕೋರಮಂಗಲದ ಜ್ಯೂಡಿಷಿಯಲ್ ಬ್ಲಾಕ್ ನಲ್ಲಿರುವ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಈ ವೇಳೆ 5ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಸೋಮವಾರ (ಜು.29) ಜಾಮೀನು ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಬೆಂಗಳೂರಿಗೆ ಕುರಿ ಮಾಂಸದ ನೆಪದಲ್ಲಿ ನಾಯಿ ಮಾಂಸವನ್ನು ಬೇರೆ ರಾಜ್ಯದಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಪುನೀತ ಕೆರೆಹಳ್ಳಿ ಹಾಗೂ ಇತರ ಹಿಂದೂ ಪರ ಕಾರ್ಯಕರ್ತರು ಮೆಜೆಸ್ಟಿಕ್‌ಗೆ ಬರುತ್ತಿದ್ದ ಮಾಂಸದ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಮಧ್ಯಪ್ರವೇಶಿಸಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಪ್ರತಿಭಟನೆ ನಡೆಸಿದ್ದ ಪುನೀತ್ ಕೆರೆಹಳ್ಳಿ ಅವರ ಮೇಲೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಮಧ್ಯರಾತ್ರಿ 12:00 ಗಂಟೆ ವೇಳೆಗೆ ಅವರನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದರು.
ನಂತರ ಠಾಣೆಯಲ್ಲಿ ಅಸ್ವಸ್ಥಗೊಂಡಿದ್ದ ಪುನೀತ್ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ವ್ಹೀಲ್‌ಚೇರ್‌ನಲ್ಲಿ ಕರೆದೊಯ್ದು ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಶನಿವಾರ ಸಂಜೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ