ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಇಲ್ಲಿ ನಡೆದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಸಮನ್ವಯ ಸಮಿತಿ ಸಭೆಯ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುವಾಗ ಅವರ ಮೂಗಿನಿಂದ ರಕ್ತಸ್ರಾವ ಉಂಟಾಗಿದೆ.
ತಕ್ಷಣವೇ ಕೇಂದ್ರ ಸಚಿವರನ್ನು ಇಲ್ಲಿನ ಜಯನಗರ ಬಡಾವಣೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಜೆಡಿಎಸ್ ನ ಇತರ ಹಿರಿಯ ನಾಯಕರು ಅವರನ್ನು ಆಸ್ಪತ್ರೆಗೆ ಸೇರಿಸಿದರು.
ಎಚ್.ಡಿ. ಕುಮಾರಸ್ವಾಮಿ ಅವರು ಬೆಳಗ್ಗೆಯಿಂದಲೇ ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ನಂಜನಗೂಡು ಪಟ್ಟಣದ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಮೈಸೂರಿಗೆ ಆಗಮಿಸಿ ಸಭೆ ನಡೆಸಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ ಅವರು ಮುಡಾ ಅಕ್ರಮವನ್ನು ಖಂಡಿಸಿ ರಾಜ್ಯ ಸರ್ಕಾರದ (Karnataka Govt) ವಿರುದ್ಧ ಮೈಸೂರಿನಿಂದ ಪಾದಯಾತ್ರೆ ಹಮ್ಮಿಕೊಳ್ಳಲು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಜಂಟಿಯಾಗಿ ನಡೆಸಿದ ಸಮನ್ವಯ ಸಭೆಯಲ್ಲಿ ಪಾಲ್ಗೊಂಡರು. ಸಭೆಯ ನಂತರ ಎಚ್.ಡಿ. ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರಿಗೆ ಇದ್ದಕ್ಕಿದ್ದಂತೆ ಮೂಗಿನಲ್ಲಿ ರಕ್ತಸ್ರಾವವಾಯಿತು.ಅವರ ಬಿಳಿ ಅಂಗಿಯ ಮೇಲೆಲ್ಲ ರಕ್ತ ಬಿದ್ದಿದ್ದು ಕಂಡಿತು. ಇದರ ಹೊರತಾಗಿಯೂ ಎಚ್.ಡಿ. ಕುಮಾರಸ್ವಾಮಿ ಗಾಬರಿಯಾಗದೆ ಯಡಿಯೂರಪ್ಪ ಅವರನ್ನು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುವಂತೆ ಹೇಳಿ, ಮೂಗಿಗೆ ಟವೆಲ್ ಒತ್ತಿದರು. ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕರ್ನಾಟಕ ಘಟಕದ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ ಈ ವೇಳೆ ಇದ್ದರು. ಅವರನ್ನು ತಕ್ಷಣವೇ ಅಪೊಲೊ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.
ಕೇಂದ್ರ ಸಚಿವರು, ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಪ್ರಸ್ತುತ ಅವರನ್ನು ಪರೀಕ್ಷಿಸಲಾಗುತ್ತಿದೆ. “ಪರೀಕ್ಷೆಗಳ ವರದಿ ಲಭ್ಯವಾದ ನಂತರ ಸ್ಪಷ್ಟ ಮಾಹಿತಿ ತಿಳಿಯಲಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಕ್ತ ತೆಳುವಾಗಿಸುವ ಔಷಧ ತೆಗೆದುಕೊಳ್ಳುವುದು ರಕ್ತಸ್ರಾವಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಅಧಿಕೃತ ಹೇಳಿಕೆ ಹೊರಬೀಳಬೇಕಿದೆ. ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಈ ಹಿಂದೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ