
ಬೆಂಗಳೂರು: ಮುಡಾ ಪ್ರಕರಣದ ಬಗ್ಗೆ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸುವ ಬಗ್ಗೆ ಬಿಜೆಪಿ- ಜೆಡಿಎಸ್ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೂಗಿನಲ್ಲಿ ರಕ್ತಸ್ರಾವ ಉಂಟಾಗಿದ್ದರಿಂದ ಅವರು ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಡಿಸ್ಚಾರ್ಜ್ ಆಗಿದ್ದಾರೆ.
ಭಾನುವಾರ ರಾತ್ರಿ ಜಯನಗರದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅಭಿಮಾನಿಗಳು, ಕಾರ್ಯಕರ್ತರು ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ. ದೇವರು, ತಂದೆ, ತಾಯಿ ಆಶೀರ್ವಾದ ಇರುವವರೆಗೆ ನನಗೆ ಯಾವುದೇ ಅಪಾಯ ಆಗುವುದಿಲ್ಲ. ಹೃದಯಕ್ಕೆ ಸಂಬಂಧಿಸಿ ಮೂರು ಬಾರಿ ವಾಲ್ವ್ ಮರು ಜೋಡಣೆ ಕಾರಣಕ್ಕಾಗಿ ಬ್ಲಡ್ ಥಿನ್ನರ್ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ರಕ್ತ ಹೆಪ್ಪುಗಟ್ಟದಿರಲಿ ಎಂಬ ಕಾರಣಕ್ಕೆ ಆ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಕೆಲವೊಮ್ಮೆ ವಿಶ್ರಾಂತಿ ರಹಿತ, ಅಧಿಕ ಒತ್ತಡದಿಂದ ಕೆಲಸ ಮಾಡುವಾಗ ಈ ರೀತಿ ಮೂಗಿನಿಂದ ರಕ್ತ ಸೋರಿಕೆಯಾಗುತ್ತದೆ ಎಂದು ತಿಳಿಸಿದ್ದಾರೆ.

ವೈದ್ಯರಿಂದ ವಿಶ್ರಾಂತಿಗೆ ಸೂಚನೆ
ವಿಶ್ರಾಂತಿ ರಹಿತ ಕೆಲಸ ಮಾಡಬೇಡಿ, ವಿಶ್ರಾಂತಿ ಪಡೆಯುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ. 92 ವರ್ಷದ ಎಚ್.ಡಿ.ದೇವೇಗೌಡರು ಸೋಮವಾರ ರಾಜ್ಯಸಭೆಯಲ್ಲಿ ಮಾತನಾಡುವವರಿದ್ದಾರೆ. ಆಗ ಅಲ್ಲಿನ ಚರ್ಚೆಯಲ್ಲಿ ಭಾಗವಹಿಸಿ ಧ್ವನಿಗೂಡಿಸಬೇಕು ಎಂದು ಮನಸ್ಸಿನಲ್ಲಿದೆʼ ಎಂದು ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಬೆಂಗಳೂರು -ಮೈಸೂರು ಪಾದಯಾತ್ರೆಗೆ ಇನ್ನೂ ಒಂದು ವಾರ ಇದೆ. ವೈದ್ಯರು ವಿಶ್ರಾಂತಿಗೆ ಸೂಚಿಸಿದರೂ ಪಾದಯಾತ್ರೆ ಮಾಡಬೇಕಿದೆ. ನನಗೆ ವಿಶ್ರಾಂತಿ ಸೂಚಿಸಿದರೆ ನಿಖಿಲ್ ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಪದಾಧಿಕಾರಿಗಳೊಂದಿಗೆ ಎಲ್ಲರ ಜೊತೆಗೂಡಿ ಪಕ್ಷದ ಸಂಘಟನೆಗೆ ಒತ್ತು ನೀಡುತ್ತಾರೆ. ನನಗೆ ವಿಶ್ರಾಂತಿ ಹೇಳಿದ್ರೆ ಅವರು (ನಿಖಿಲ್) ನೇತೃತ್ವದಲ್ಲಿ ಇದು ನಡೆಯುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಮಾಹಿತಿ ನೀಡಿದರು.


ನಿಮ್ಮ ಕಾಮೆಂಟ್ ಬರೆಯಿರಿ