ಬೆಂಗಳೂರು: ಯಾದಗಿರಿ ನಗರ ಠಾಣೆ ಪಿಎಸ್ಐ ಪರಶುರಾಮ್ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಕೂಲಂಕುಶ ತನಿಖೆ ನಡೆಸುವಂತೆ ಸಿಐಡಿ ಡಿಜಿಪಿಗೆ ಗೃಹ ಇಲಾಖೆ ಪತ್ರ ಬರೆದಿದೆ.
ಪಿಎಸ್ಐ ಪರಶುರಾಮ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದರು. ಆದರೆ ಶಾಸಕ ಹಾಗೂ ಪುತ್ರನ ನಿರಂತರ ಒತ್ತಡದಿಂದ ನನ್ನ ಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಪರಶುರಾಮ ಅವರ ಪತ್ನಿ ಆರೋಪಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲೇ ಮುಂದುವರಿಯಲು 30 ಲಕ್ಷ ರೂ ಹಣಕ್ಕಾಗಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ಹಾಗೂ ಅವರ ಪುತ್ರ ಪಂಪನ ಗೌಡ ಬೇಡಿಕೆ ಇಟ್ಟಿದ್ದರು ಎಂದು ಪರಶುರಾ ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದ್ದಾರೆ.
ಪರಶುರಾಮ ಕಳೆದ 7 ತಿಂಗಳಿನಿಂದ ನಗರ ಠಾಣೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಸೆನ್ ಠಾಣೆಗೆ ವರ್ಗಾವಣೆ ಮಾಡಿದ್ದರು. ಬಳಿಕ ನಗರ ಠಾಣೆಯಲ್ಲೇ ಮುಂದುವರಿಯಲು 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ನನ್ನ ಪತಿ ಪರಶುರಾಮ ತೀವ್ರ ಮನನೊಂದಿದ್ದರು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪಿಎಸ್ಐ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈಗ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ