ಮದುವೆ ಬಳಿಕ ಮೊದಲ ಬಾರಿಗೆ ಮನೆಗೆ ಬಂದ ಅಳಿಯನಿಗೆ ಅತ್ತೆ-ಮಾವಂದಿರು ವಿಶೇಷ ಆದರಾಥಿತ್ಯ ಮಾಡುವುದು ಸಾಮಾನ್ಯ ಸಂಗತಿ. ಆದರೆ, ಆಂಧ್ರದ ಗೋದಾವರಿ ಜಿಲ್ಲೆಯಲ್ಲಿ ಮದುವೆಯಾದ ನಂತರ ಮೊದಲ ಆಷಾಢ ಮಾಸಕ್ಕೆ ತನ್ನ ಮಾವನ ಮನೆಗೆ ಬಂದ ಅಳಿಯ(ಮಗಳ ಗಂಡ)ನಿಗೆ 100 ಖಾದ್ಯಗಳನ್ನು ಉಣ ಬಡಿಸಿ ಸ್ವಾಗತ ಮಾಡಲಾಗಿದೆ…!
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿವಾಹವಾಗಿದ್ದ ದಂಪತಿ ಕಾಕಿನಾಡದಲ್ಲಿರುವ ಪತ್ನಿಯ ತವರು ಮನೆಗೆ ಹೋದಾಗ ಅವರನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಅವರ ಆಗಮನದ ಸಂಭ್ರಮಾಚರಣೆಗೆ ವಿವಿಧ ಬಗೆಯ 100 ಭಕ್ಷ್ಯಗಳನ್ನು ಮಾಡಿ ಉಣಬಡಿಸಲಾಯಿತು.
ಕಾಕಿನಾಡ ಜಿಲ್ಲೆಯ ಕಿರ್ಲಂಪುಡಿ ಮಂಡಲದ ತಾಮರದ ಗ್ರಾಮದ ರತ್ನಕುಮಾರಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾಕಿನಾಡ ನಗರದ ರವಿತೇಜ ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ಆಷಾಢ ಮಾಸ ಮುಗಿದು ಅಳಿಯ ಮೊದಲಬಾರಿಗೆ ಅತ್ತೆಯ ಮನೆಗೆ ಬಂದಾಗ ಅತ್ತೆ ತನ್ನ ಅಳಿಯನಿಗೆ ಭರ್ಜರಿ ಊಟವನ್ನೇ ಸಿದ್ಧಪಡಿಸಿದ್ದರು.
ಆಂಧ್ರಪ್ರದೇಶದ ಕಾಕಿನಾಡದ ಹಳ್ಳಿಯೊಂದರಲ್ಲಿ ನಡೆದ ಘಟನೆಯ ದೃಶ್ಯಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡು ವೈರಲ್ ಆಗಿವೆ. ಅವರು ಪತ್ನಿಯ ಮನೆಗೆ ಭೇಟಿ ನೀಡುವ ಸಮಯದಲ್ಲಿ ವಿವಾಹಿತ ದಂಪತಿಗೆ ನೀಡಲಾಗುವ ಭಕ್ಷ್ಯಗಳ ಭವ್ಯವಾದ ಪ್ರದರ್ಶನವನ್ನೇ ತೋರಿಸುತ್ತದೆ. ಆಶ್ಚರ್ಯದ ಸಂಗತಿಯೆಂದರೆ ಮನೆಯಲ್ಲಿಯೇ ಎಲ್ಲ 100 ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗಿತ್ತು. ಸಾಂಪ್ರದಾಯಿಕ ಆಂಧ್ರದ ಪಾಕಪದ್ಧತಿ ಮತ್ತು ಚಕ್ಕುಲಿಯಿಂದ ಹಿಡಿದು ಮೈಸೂರು ಪಾಕದ ವರೆಗೆ ಅನೇಕ ವಿಧದ ಸಾಂಪ್ರದಾಯಿಕ-ಆಧುನಿಕ ಭಕ್ಷ್ಯಗಳನ್ನು ಒಳಗೊಂಡಿತ್ತು.
ಬೇರೆಡೆ ಅಳಿಯಂದಿರನ್ನು ಸ್ವಾಗತಿಸಿದರೂ ಆಂಧ್ರಪ್ರದೇಶದಲ್ಲಿ ಅಳಿಯಂದಿರಿಗೆ ನೀಡುವ ಆತಿಥ್ಯ ವಿಶಿಷ್ಟ. ಕೆಲವು ದಿನಗಳ ಹಿಂದೆ ವೈರಲ್ ಆದ ವೀಡಿಯೊದಲ್ಲಿ, ಒಂದು ಕುಟುಂಬವು ತಮ್ಮ ಅಳಿಯನನ್ನು ಸ್ವಾಗತಿಸಲು ನಾಲ್ಕು ದಿನಗಳ ಕಾಲ ಶ್ರಮಿಸಿ ಒಟ್ಟು 173 ಭಕ್ಷ್ಯಗಳನ್ನು ಬಡಿಸಿದರೆ, ಮತ್ತೊಂದು ಕುಟುಂಬವು ತಮ್ಮ ಅಳಿಯನನ್ನು ಸ್ವಾಗತಿಸಲು 379 ಭಕ್ಷ್ಯಗಳನ್ನು ತಯಾರಿಸಿತ್ತು.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಾಪುರದ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ. ಇಲ್ಲಿ ಮಗಳು ಮತ್ತು ಅಳಿಯನನ್ನು ಸ್ವಾಗತಿಸಲು ಕುಟುಂಬದವರು 379 ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ. 10 ದಿನಗಳ ಶ್ರಮದ ನಂತರ ಅಳಿಯನಿಗೆ ಅತ್ತೆ ಊಟ ಬಡಿಸಿದಾಗ ಅದನ್ನು ನೋಡಿ ಆ ಅಳಿಯ ಬೆರಗಾಗಿದ್ದಾನೆ. ಈ ಹಬ್ಬವನ್ನು ಮಕರ ಸಂಕ್ರಾಂತಿಯಂದು ನೀಡಲಾಯಿತು. ಮಾಹಿತಿಯ ಪ್ರಕಾರ, ಆಹಾರದಲ್ಲಿ 40 ಬಗೆಯ ಅನ್ನ, 40 ಕರಿಗಳು, 20 ರೊಟ್ಟಿ-ಚಟ್ನಿ, 100 ಸಿಹಿತಿಂಡಿಗಳು ಮತ್ತು 70 ಪಾನೀಯಗಳು ಸೇರಿವೆ.
ನಿಮ್ಮ ಕಾಮೆಂಟ್ ಬರೆಯಿರಿ