ಕೊಪ್ಪಳ : ತುಂಗಭದ್ರಾ ಜಲಾಶಯದಲ್ಲಿ ಮುದು ತುಂಡಾಗಿದ್ದು 19ನೇ ಗೇಟ್ನಲ್ಲಿ ಎಲ್ಲಾ 5 ಸ್ಟಾಪ್ ಲಾಗ್ ಅಳವಡಿಕೆ ಯಶಸ್ವಿಯಾಗಿದ್ದು, ಪೋಲಾಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ತಜ್ಞರ ತಂಡ ಯಶಸ್ವಿಯಾಗಿದೆ.
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ಗೆ ತಾತ್ಕಾಲಿಕವಾಗಿ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ಮುಗಿದಿದ್ದು, ತಂತ್ರಜ್ಞ ಕನ್ನಯ್ಯ ನಾಯ್ಡು ಮಾರ್ಗದರ್ಶನದಲ್ಲಿ ಇದೇ ಮೊದಲ ಬಾರಿಗೆ ಹರಿಯುತ್ತಿರುವ ನೀರಿನಲ್ಲಿ ತಾತ್ಕಾಲಿಕ ಗೇಟ್ ಅಳವಡಿಕೆಯು ಯಶಸ್ವಿಯಾಗಿದೆ.
ಸದ್ಯ ಜಲಾಶಲಯದ ಎಲ್ಲ 33 ಗೇಟ್ಗಳನ್ನು ಮುಚ್ಚಲಾಗಿದೆ ಎಂದು ಟಿಬಿ ಡ್ಯಾಂ ಮಂಡಳಿ ತಿಳಿಸಿದೆ. ಈ ಸ್ಟಾಪ್ ಲಾಗ್ ಅಳವಡಿಕೆಯಿಂದ ಅಣೆಕಟ್ಟೆಯಲ್ಲಿ ಸಂಗ್ರಹವಾಗಿದ್ದ ಸುಮಾರು 70 ಟಿಎಂಸಿಯಷ್ಟು ನೀರನ್ನು ಉಳಿಸಲು ಸಾಧ್ಯವಾಗಿದೆ.
ನದಿ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಳ ಹರಿವು ಹೆಚ್ಚಾಗಿದ್ದು, ಹೀಗಾಗಿ ಈವರೆಗೆ ಪೋಲಾದ ನೀರು ಮತ್ತೆ ಸಂಗ್ರಹವಾಗುವ ವಿಶ್ವಾಸ ಮೂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಣೆಕಟ್ಟು ತಜ್ಞ ಕನ್ನಯ್ಯ ನಾಯ್ಡು ತಂಡ ಮೂರು ದಿನಗಳಿಂದ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು. ಅಕ್ಟೋಬರ್ 16 ರಂದು ಮೊದಲ ಎಲಿಮೆಂಟ್ ಅಳವಡಿಸಲಾಗಿತ್ತು. ಶನಿವಾರ ಸಂಜೆ ಎಲ್ಲ 5 ಸ್ಟಾಪ್ ಲಾಗ್ ಅಳವಡಿಕೆಯಿಂದಾಗಿ ಡ್ಯಾಂನಿಂದ ಹೊರ ಹೋಗುತ್ತಿದ್ದ ನೀರು ಸ್ಥಗಿತಗೊಂಡಿದೆ.
ಅಣೆಕಟ್ಟು ತಜ್ಞ ಕನ್ನಯ್ಯ ನಾಯ್ಡು ಮಾತನಾಡಿ, ಹರಿಯುವ ನೀರಿನಲ್ಲೇ ಗೇಟ್ ಅಳವಡಿಕೆ ಸವಾಲಿನ ಕೆಲಸ ಆಗಿತ್ತು. ಆದರೂ ನಮ್ಮ ಮನೆ ದೇವರಾದ ತಿರುಪತಿ ತಿಮ್ಮಪ್ಪನ ಆಶೀರ್ವಾದದಿಂದ ಯಶಸ್ಸು ಸಾಧಿಸಿದ್ದೇವೆ. ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ