
ಉಡುಪಿ : ಶಿರ್ವ ಶ್ರೀ ಸಿದ್ಧಿ ವಿನಾಯಕ ದೇಗುಲ ಕಟ್ಟಿಸಿದ್ದ ಉದ್ಯಮಿ ಗ್ಯಾಬ್ರಿಯಲ್ ಫೇಬಿಯನ್ (80) ಭಾನುವಾರ (ಆಗಸ್ಟ್ 18) ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಐದು ದಶಕಗಳ ಕಾಲ ಉದ್ಯಮಿಯಾಗಿ ಬಳಿಕ ನಿವೃತ್ತಿಗೊಂಡು ತನ್ನ ಸ್ವಂತ ಊರಿಗೆ ಬಂದು ನೆಲೆಸಿದ್ದ ಗ್ಯಾಬ್ರಿಯಲ್, ತನ್ನ ಆರಾಧ್ಯ ದೈವ ಗಣಪತಿಗೆ ತನ್ನೂರಲ್ಲೇ ಗುಡಿ ಕಟ್ಟಿಸಿದ್ದರು…!
ಶ್ರೀ ಸಿದ್ಧಿ ವಿನಾಯಕನ ಪರಮ ಭಕ್ತರಾಗಿದ್ದ ಅವರು ತನ್ನ ಧರ್ಮದ ಜೊತೆಗೆ ಹಿಂದೂ ಧರ್ಮದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅವರು ಅವಿವಾಹಿತರಾಗಿದ್ದರು. ಮುಂಬೈಯಲ್ಲಿದ್ದ ತನ್ನ ಸ್ವಂತ ಉದ್ದಿಮೆ ಮಾರಾಟ ಮಾಡಿ ಊರಿಗೆ ಬಂದು ನೆಲೆಸಿದ ನಂತರ 15 ಸೆಂಟ್ಸ್ ಜಾಗದಲ್ಲಿ ಕಟಪಾಡಿ ಮತ್ತು ಶಿರ್ವ ಮುಖ್ಯ ರಸ್ತೆಯ ಮಟ್ಟಾರು-ಅಟ್ಟಿಂಜ ಕ್ರಾಸ್ ಬಳಿ 2 ಕೋಟಿ ವೆಚ್ಚದಲ್ಲಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ನಿರ್ಮಿಸಿ ಗಮನ ಸೆಳೆದಿದ್ದರು. 2021ರ ಜುಲೈ 15 ರಂದು ದೇಗುಲ ಲೋಕಾರ್ಪಣೆಗೊಂಡಿತ್ತು. ನಂತರ ಅದನ್ನು ಹಿಂದೂಗಳಿಗೆ ನೀಡಿದ್ದಾರೆ ಮುಂಬೈನಲ್ಲಿ ಉದ್ಯಮಿಯಾಗಿದ್ದ ಗ್ಯಾಬ್ರಿಯಲ್ ನಜ್ರತ್ ಅವರು ಇಷ್ಟೊಂದು ಉತ್ತರಕ್ಕೆ ಏರಲು ತಾನು ನಂಬಿದ್ದ ಗಣಪತಿಯೇ ಕಾರಣ ಎಂದು ನಂಬಿದ್ದರು.

ಐದು ದಶಕಗಳ ಹಿಂದೆ ಬರಿಗೈಯಲ್ಲಿ ಮುಂಬೈನ ದಾದರಿಗೆ ತೆರಳಿದ್ದ ಗ್ಯಾಬ್ರಿಯಲ್ ಬಳಿ ಆಗ ಏನೂ ಇರಲಿಲ್ಲ. ಅವರು ಅಲ್ಲಿ ದಾದರಿನ ಸಿದ್ಧಿವಿನಾಯಕ ದೇವಸ್ಥಾನದ ಬಳಿಯೇ ನೆಲೆಸಿದ್ದರು. ಅವರು ಶ್ರೀ ಸಿದ್ಧಿ ವಿನಾಯಕನನ್ನು ಆರಾಧಿಸಿ, ಬಲವಾದ ನಂಬಿಕೆ ಇಟ್ಟು ದೇವಸ್ಥಾನದ ಬಳಿ ಪ್ಲಾಸ್ಟಿಕ್ ಮತ್ತು ಮೆಟಲ್ ಡೈ ಮೇಕಿಂಗ್ ವರ್ಕ್ ಶಾಪ್ ಸ್ಥಾಪಿಸಿ ಯಶಸ್ಸು ಗಳಿಸಿದ್ದರು. ದಾದರ್ ಸಿದ್ಧಿವಿನಾಯಕನ ಅನನ್ಯ ಭಕ್ತರೂ ಆಗಿದ್ದ ಅವರು ನಂತರ ಮೂರು ಕಡೆ ಉದ್ದಿಮೆ ಸ್ಥಾಪನೆ ಮಾಡಿದ್ದರು. ನೋಡ ನೋಡುತ್ತಲೇ ಉದ್ಯಮ ಸ್ಥಾಪಿಸಿ, ಯಶಸ್ಸು ಪಡೆದ ಗ್ಯಾಬ್ರಿಯಲ್ ತನ್ನ ಉನ್ನತಿಗೆ ಗಣಪತಿಯೇ ಕಾರಣವೆಂದು ಬಲವಾಗಿ ನಂಬಿದ್ದರು. ಉದ್ಯಮದಲ್ಲಿ ಅಪಾರ ಲಾಭ ಗಳಿಸಿದ ಗ್ಯಾಬ್ರಿಯಲ್, ವರ್ಷಗಳ ಹಿಂದೆ ಕೆಲಸಕ್ಕೆ ನಿವೃತ್ತಿ ಘೋಷಿಸಿ, ತಮ್ಮ ಸ್ವಂತ ಊರಾದ ಉಡುಪಿಯ ಶಿರ್ವಕ್ಕೆ ಬಂದು ನೆಲೆಸಿದ್ದರು. ಮುಂಬೈಯ ಉದ್ದಿಮೆ ಮಾರಿ ಬಂದ ಹಣವನ್ನು ಅಲ್ಲಿಯ ಸಿಬ್ಬಂದಿ ವರ್ಗಕ್ಕೆ ದಾನವಾಗಿ ನೀಡಿ ಬಂದಿದ್ದರು. ಜಾತಿ ಮತವಿಲ್ಲದೆ ಸುಮಾರು 50 ಜನರ ಮದುವೆಗೆ ಧನ ಸಹಾಯ ಮಾಡಿದ್ದರು.
ಅವರಿಗೆ ತನ್ನೂರಾದ ಶಿರ್ವದಲ್ಲಿಯೇ ವಿನಾಯಕನ ದೇವಸ್ಥಾನ ಕಟ್ಟಿಸಬೇಕೆಂದು ಬಲವಾದ ಇಚ್ಛೆಯಿತ್ತು. ಹೀಗಾಗಿ ಶಿರ್ವದ ತಮ್ಮದೇ ಜಮೀನಿನಲ್ಲಿ ಸ್ವಂತ ಖರ್ಚಿನಲ್ಲಿ ದೇವಸ್ಥಾನ ಕಟ್ಟಿಸಿದ್ದಾರೆ. ದೇವಸ್ಥಾನದ ಕಾಮಗಾರಿ ಮುಗಿದಿದ್ದರೂ ಲಾಕ್ ಡೌನ್ ಕಾರಣದಿಂದ ಲೋಕಾರ್ಪಣೆ ವಿಳಂಬವಾಗಿತ್ತು. ಕೊನೆಗೆ 2021 ರ ಜುಲೈ 14, 15 ಮತ್ತು 16ರಂದು ಪ್ರತಿಷ್ಠಾ ಉತ್ಸವ ನಡೆದು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಲೋಕಾರ್ಪಣೆ ಕಾರ್ಯ ನಡೆದಿತ್ತು. ಅವರು ದೇಗುಲದಲ್ಲಿ ಪೂಜಾ ಕಾರ್ಯಕ್ಕೆ ಅರ್ಚಕರನ್ನೂ ನೇಮಿಸಿದ್ದಾರೆ.
ಗ್ಯಾಬ್ರಿಯಲ್ ತಮ್ಮ ಹೆತ್ತವರ ನೆನಪಿಗಾಗಿ ಈ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಶಿರ್ವದಲ್ಲಿ ಕ್ರೈಸ್ತ ವ್ಯಕ್ತಿಯೊಬ್ಬರು ಹಿಂದುಗಳ ಆರಾಧನೆಯ ದೇವಸ್ಥಾನವನ್ನು ನಿರ್ಮಿಸಿದ್ದು, ಧಾರ್ಮಿಕ ಸಾಮರಸ್ಯದ ಸಂಕೇತ ಎನ್ನುವ ರೀತಿ ಪ್ರಸಿದ್ಧಿ ಪಡೆದಿದೆ.


ನಿಮ್ಮ ಕಾಮೆಂಟ್ ಬರೆಯಿರಿ