
ಬೆಂಗಳೂರು : ಯಾರೇ ಬೈದರೂ ವಿಪಕ್ಷಗಳು ವಿರೋಧ ಮಾಡಿದರೂ ನಾವು ನೀರಿನ ದರ ಹೆಚ್ಚಳ ಮಾಡುತ್ತೇವೆ. ಯಾಕೆಂದರೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹೇಳಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೀರಿನ ದರ ಹಲವು ವರ್ಷಗಳಿಂದ ಏರಿಸಿಲ್ಲ. ಬೆಂಗಳೂರಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ಮೇಕೆದಾಟು ಯೋಜನೆ ಮೇಲೆ ನನಗೆ ಭರವಸೆ ಇದೆ. ಆದಷ್ಟು ಬೇಗ ಅದು ಆಗಲಿದೆ. ಶರಾವತಿ ಕುಡಿಯುವ ನೀರಿನ ಯೋಜನೆಯು ಇದೆ. ನೀರಾವರಿ ಯೋಜನೆಯಲ್ಲಿ ಹೊಸ ಕಾನೂನು ತಂದಿದ್ದೇವೆ. ನೀರಿನ ಕಾಲುವೆಗಳ ಅಕ್ಕಪಕ್ಕ ಅರ್ಧ ಕಿಮೀ ಯಾರು ಬೋರ್ ವೆಲ್ ಹಾಕುವಂತಿಲ್ಲ. ಯಾರು ಕಾಲುವೆಗಳಿಂದ ನೇರವಾಗಿ ನೀರು ಟ್ಯಾಪ್ ಮಾಡುವಂತಿಲ್ಲ. ಹೊಸ ಕಾನೂನಿಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ ಎಂದು ತಿಳಿಸಿದರು.

ಜಲಮಂಡಳಿ ಉಳಿಸಬೇಕು ಅಂದರೆ ನೀರಿನ ದರ ಏರಿಕೆ ಅನಿವಾರ್ಯವಾಗುತ್ತದೆ. ಇದರ ಬಗ್ಗೆ ಬಿಡಬ್ಲ್ಯೂಎಸ್‍ಎಸ್‍ಬಿ ಜನರಿಗೆ ಜಾಗೃತಿ ಮೂಡಿಸಬೇಕು. ನೀರಿದ ದರ 8-9 ವರ್ಷದಿಂದ ಏರಿಕೆಯಾಗಿಲ್ಲ. ನೀರಿನ ದರ ಹೆಚ್ಚಿಸಬೇಕು, ಅಂತರ್ಜಲ ಹೆಚ್ಚಳ ಆಗ್ಬೇಕು. ಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡಲು ಕಷ್ಟವಾಗುತ್ತಿದೆ. ಜಲ ಮಂಡಳಿಯು ವಿದ್ಯುತ್ ದರವನ್ನೂ ಪಾವತಿ ಮಾಡಲು ಆಗುತ್ತಿಲ್ಲ. ಎಷ್ಟು ದರ ಏರಿಕೆ ಮಾಡ್ಬೇಕು ಎಂದು ಇನ್ನೂ ನಿರ್ಧಾರ ಮಾಡಿಲ್ಲ. ಕಮಿಟಿ ಸಭೆ ಮತ್ತು ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.


ನಿಮ್ಮ ಕಾಮೆಂಟ್ ಬರೆಯಿರಿ