
ಬೆಂಗಳೂರು: ಮುಡಾ ಹಗರಣದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಪಾತ್ರವೇ ಇಲ್ಲ ಎಂದು ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತೊಂದು ದಾಖಲೆ ಬಿಡುಗಡೆ ಮಾಡಿ ಉತ್ತರ ನೀಡಿದ್ದಾರೆ.
ಎಕ್ಸ್ ಖಾತೆಯಲ್ಲಿ ಮುಡಾ ದಾಖಲೆ ಪೋಸ್ಟ್ ಮಾಡಿರುವ ಅವರು, ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವ ಮುಡಾ ಪ್ರಸ್ತಾವನೆ ನಿರಾಕರಿಸಿ 50:50ರ ಅನುಪಾತದಲ್ಲಿಯೇ ಮುಡಾ ಬದಲಿ ನಿವೇಶನ ನೀಡಲೇಬೇಕು ಎಂದು ಸಿಎಂ ಸಾಹೇಬರ ಧರ್ಮಪತ್ನಿ ‘ಒತ್ತಾಯ’ ಮಾಡಿದ್ದಾರೆ’ ಎಂದು ದಾಖಲೆಯನ್ನು ಲಗತ್ತಿಸಿ ಕುಮಾರಸ್ವಾಮಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ.. ಮುಡಾ ನಿವೇಶನ ಹಂಚಿಕೆಯಲ್ಲಿ ನನ್ನ ಹಾಗೂ ನನ್ನ ಕುಟುಂಬದ ಪಾತ್ರವೇ ಇಲ್ಲ ಎಂದು ಬೊಗಳೆ ಬಿಡುವ ನಿಮಗೆ ಕನ್ನಡ ಬರುತ್ತದೆ, ಭಾಷೆಯೂ ಗೊತ್ತಿದೆ ಎಂದು ನಾನಾದರೂ ಪರಿಭಾವಿಸುತ್ತೇನೆ. ನೀವು ಸ್ವಯಂಘೋಷಿತ ವಕೀಲರಲ್ಲವೇ? ದಾಖಲೆಯನ್ನೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಓದಿ ಎಂದು ದಾಖಲೆಯನ್ನು ಎಕ್ಸ್ ಖಾತೆಯಲ್ಲಿ ಟ್ಯಾಗ್ ಮಾಡಿದ್ದಾರೆ.

“50:50ರ ಅನುಪಾತದಲ್ಲಿಯೇ ಮುಡಾ ಬದಲಿ ನಿವೇಶನ ನೀಡಲೇಬೇಕು ಎಂದು ಸಿಎಂ ಸಾಹೇಬರ ಧರ್ಮಪತ್ನಿ ‘ಒತ್ತಾಯ’ ಮಾಡಿದ್ದಾರೆ!!” ಹಾಗೂ “ಅರ್ಜಿದಾರರಾದ ಶ್ರೀಮತಿ ಪಾರ್ವತಮ್ಮ ಇವರಿಗೆ ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ನೀಡುವುದಾಗಿಯೂ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವುದಾಗಿಯೂ ತಿಳಿಸಲಾಗಿತ್ತು. ಆದರೆ ಪ್ರಾಧಿಕಾರದ ಈ ಸಲಹೆಗೆ ಅವರು ಒಪ್ಪಿಗೆ ನೀಡದೇ ಇದ್ದು, ಬದಲಿ ಜಮೀನನ್ನು ನೀಡುವಂತೆ ಒತ್ತಾಯಿಸಿರುತ್ತಾರೆ.” ಇದು ಮೂಡಾ ದಾಖಲೆಯಲ್ಲಿರುವ ಒಕ್ಕಣೆ. ಇದಕ್ಕೆ ತಾವು ಏನಂತೀರಿ? ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಇದು ತಮ್ಮ ಪ್ರಕಾರ ಟಿಪ್ಪಣಿಯೋ..? ಒಕ್ಕಣೆಯೋ..? ಅಥವಾ ಅಪ್ಪಣೆಯೋ..? ಸೂಪರ್ ಸಿಎಂ ಅವರೇ ‘ಒತ್ತಾಯಿಸಿರುತ್ತಾರೆ!!!’ ಎಂದರೆ ಮೂಡಾ ಅಧಿಕಾರಿಗಳು ಇನ್ನೇನು ಮಾಡಿಯಾರು? ಆಗ ತಾವು ರಾಜ್ಯದಲ್ಲಿ ಏನಾಗಿದ್ದಿರಿ? ವಿಧಾನಸೌಧದ 3ನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದಿರಿ. ಈಗ ಹೇಳಿ.. ಯಾರ ತಟ್ಟೆಯಲ್ಲಿ ಏನು ಸತ್ತು ಬಿದ್ದಿದೆ? ಅಥವಾ ಕಪ್ಪುಚುಕ್ಕೆಯನ್ನು ವೈಟ್ನರ್ ನುಂಗಿತ್ತಾ..? ಎಂದು ಅವರು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಹೆಚ್ಚಾಗುತ್ತಿದೆ. ಇದರ ಮಧ್ಯೆ ಗುರುವಾರ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಪರವಾಗಿ ಶಾಸಕರು ಬೆಂಬಲ ಸೂಚಿಸಿದ್ದರು. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ, ರಾಜಕೀಯವಾಗಿ ಆರೋಪ ಮಾಡಲಾಗುತ್ತಿದೆ ಎಂಬುದು ಅವರ ಬೆಂಬಲಿಗರ ವಾದವಾಗಿದೆ.
ರಾಜ್ಯಪಾಲರು ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಮತ್ತೊಂದೆಡೆ, ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಜೆಡಿಎಸ್ ಮೈತ್ರಿ ನಾಯಕರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಪ್ರಕ್ರಿಯೆ ತ್ವರಿತಗೊಳಿಸುವಂತೆ ರಾಜ್ಯಪಾಲರಿಗೆ ಸಲಹೆ ನೀಡಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ