ದೆಹಲಿ ಅಬಕಾರಿ ನೀತಿ ಪ್ರಕರಣ: ಬಿಆರ್‌ ಎಸ್‌ ನಾಯಕಿ ಕವಿತಾಗೆ ಸುಪ್ರೀಂ ಕೋರ್ಟ್ ಜಾಮೀನು

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಲಾಯ (ಇ.ಡಿ.) ಮತ್ತು ಸಿಬಿಐ ದಾಖಲಿಸಿದ್ದ ಎರಡೂ ಪ್ರಕರಣಗಳಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ. ಕವಿತಾ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ತನಿಖೆ ಪೂರ್ಣಗೊಂಡಿದ್ದು ವಿಚಾರಣೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಹಿಡಿಯುವುದರಿಂದ ಈ ಆದೇಶ ನೀಡುತ್ತಿರುವುದಾಗಿ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿದೆ.
ತನಿಖೆ ಪೂರ್ಣಗೊಂಡಿದ್ದು ಆರೋಪಪಟ್ಟಿ ಸಲ್ಲಿಸಲಾಗಿದೆ. ಕವಿತಾ ಅವರನ್ನು ಕಸ್ಟಡಿಯಲ್ಲಿರಿಸಿಕೊಳ್ಳುವ ಅಗತ್ಯವಿಲ್ಲ, ಅವರು 5 ತಿಂಗಳ ಕಾಲ ಜೈಲಿನಲ್ಲಿದ್ದಾರೆ. ಶೀಘ್ರವೇ ವಿಚಾರಣೆ ಮುಕ್ತಾಯಗೊಳ್ಳುವ ಸಾಧ್ಯತೆ ಕಂಡುಬರುತ್ತಿಲ್ಲ. ಈ ಕುರಿತು ವಿವಿಧ ತೀರ್ಪುಗಳಲ್ಲಿ ಹೇಳಿರುವಂತೆ ನ್ಯಾಯಾಲಯದ ವಿಚಾರಣಾಧೀನತೆ ಎಂಬುದು ಶಿಕ್ಷೆಯಾಗಿ ಬದಲಾಗಬಾರದು ಎಂದು ನ್ಯಾಯಾಲಯ ವಿವರಿಸಿದೆ.

ಪಿಎಂಎಲ್ಎ ಪ್ರಕಾರ ಮಹಿಳೆಯರಿಗೆ ಇರುವ ಸವಲತ್ತಿನಡಿ ವಿದ್ಯಾವಂತ ಮಹಿಳೆ ಜಾಮೀನು ಪಡೆಯಲು ಅರ್ಹರಲ್ಲ ಎಂಬ ದೆಹಲಿ ಹೈಕೋರ್ಟ್ ಅವಲೋಕನಗಳಿಗೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸೆಕ್ಷನ್‌ 45(1)ರ ನಿಬಂಧನೆಯಡಿ ಮಹಿಳೆಯನ್ನು ವಿಶೇಷವಾಗಿ ಪರಿಗಣಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಕವಿತಾ ಅವರು ಸುಶಿಕ್ಷಿತ ಮಹಿಳೆಯಾಗಿದ್ದು, ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ ಎಂದಿದ್ದ ಹೈಕೋರ್ಟ್‌ ಆಕೆ ಸುಶಿಕ್ಷಿತರು ಎಂಬ ಕಾರಣಕ್ಕೇ ಜಾಮೀನು ನಿರಾಕರಿಸಿದ್ದು ವಿರೋಧಾಭಾಸದ ಸಂಗತಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಪಿಎಂಎಲ್‌ಎ ಅಡಿಯಲ್ಲಿ ಆರೋಪಿಯಾಗಿರುವ ಮಹಿಳೆಯರ ಬಗ್ಗೆ ನ್ಯಾಯಾಲಯಗಳು ಹೆಚ್ಚು ಸಂವೇದನಾಶೀಲವಾಗಿರಬೇಕು ಎಂದು ಕೂಡ ಅದು ಕಿವಿಹಿಂಡಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನಕ್ಕೆ ಐಎಂಎಫ್‌ನ ಬೇಲ್‌ಔಟ್ ಪ್ಯಾಕೇಜ್ ಮೇಲಿನ ಮತದಾನದಿಂದ ದೂರ ಉಳಿದ ಭಾರತ ; ಪಾಕಿಸ್ತಾನದ 'ಕಳಪೆ ದಾಖಲೆ'ಯ ಉಲ್ಲೇಖ

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸ್ವರಣಾಕಾಂತ ಶರ್ಮಾ ಅವರು ಜುಲೈ 1 ರಂದು ಬಿಆರ್‌ಎಸ್ ನಾಯಕಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು. ಆ ಬಳಿಕ ಕವಿತಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.
ಈ ಹಿಂದೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಾದ ಸಂಜಯ ಸಿಂಗ್ ಮತ್ತು ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರು ಇ ಡಿ ಪ್ರಕರಣದಲ್ಲಿ ಜಾಮೀನು ಪಡೆದಿದ್ದು ಸಿಬಿಐ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement