ಮುಡಾ ಹಗರಣ: ರಾಜ್ಯಪಾಲರು ಸಕಾರಣದಿಂದ ಸಂಪುಟದ ಶಿಫಾರಸ್ಸು ಪರಿಗಣಿಸಿಲ್ಲ : ಸಾಲಿಸಿಟರ್‌ ಜನರಲ್‌ ಮೆಹ್ತಾ

ಬೆಂಗಳೂರು : ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ನೀಡಿರುವ ಅಭಿಯೋಜನಾ ಮಂಜೂರಾತಿಯು ವಿವೇಚನೆಯಿಂದ ಕೂಡಿದ್ದು, ಸಕಾರಣದಿಂದ ಅವರು ಸಂಪುಟ ಸಭೆಯ ಶಿಫಾರಸ್ಸನ್ನು ಪರಿಗಣಿಸಿಲ್ಲ ಎಂದು ಹೈಕೋರ್ಟ್‌ನಲ್ಲಿ ಶನಿವಾರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರಾಸಿಕ್ಯುಶನ್‌ಗೆ ನೀಡಿದ ರಾಜ್ಯಪಾಲರ ನಿರ್ಧಾರವನ್ನು ಬಲವಾಗಿ ಸಮರ್ಥಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸುದೀರ್ಘ ಎರಡು ತಾಸು ವಾದಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಿರುವ ಪ್ರಕರಣದಲ್ಲಿ ರಾಜ್ಯಪಾಲರು ಸಂಪುಟ ಸಭೆಯ ಶಿಫಾರಸ್ಸನ್ನು ಆಧರಿಸಬೇಕಿಲ್ಲ. ಮೇಲ್ನೋಟಕ್ಕೆ ತನಿಖಾ ಸಂಸ್ಥೆಯು ಕಾನೂನಿನ ಅಡಿ ಪ್ರಕರಣದ ತನಿಖೆ ನಡೆಸಬೇಕಿದೆಯೇ ಎಂಬುದರ ಪ್ರಕಾರ ರಾಜ್ಯಪಾಲರು ಮುನ್ನಡೆದಿದ್ದಾರೆ ಎಂದು ಹೇಳಿದರು ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ರಾಜ್ಯಪಾಲರ ನಿರ್ಧಾರವು ವಾಸ್ತವಿಕ ಅಂಶಗಳನ್ನು ಆಧರಿಸಿದೆ. ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 17ಎ ಎಲ್ಲಾ ಕಡೆ ಅನ್ವಯವಾಗುತ್ತದೆ. ಇದಕ್ಕೆ ಲಲಿತಾಕುಮಾರಿ ತೀರ್ಪಿನ ನೆರವು ಪಡೆಯಬಹುದಾಗಿದೆ. ಸಂಜ್ಞೇಯ ಅಪರಾಧ ಎಂಬುದು ತಿಳಿದಾಗ ರಾಜ್ಯಪಾಲರು ಅಥವಾ ತಹಶೀಲ್ದಾರ್‌ ಆಗಲಿ ವಿವೇಚನೆ ಬಳಸಿ ಅನುಮತಿಸಬೇಕು. ಭ್ರಷ್ಟಾಚಾರ ನಿರೋಧಕ ಕಾಯಿದೆ ಅಡಿ ಇದು ಎಲ್ಲಾ ಸರ್ಕಾರಿ ಸೇವಕರಿಗೆ ಅನ್ವಯಿಸುತ್ತದೆ. ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ದೂರನ್ನು ಓದಿದ ಬಳಿಕ ರಾಜ್ಯಪಾಲರಿಗೆ ಮೇಲ್ನೋಟಕ್ಕೆ ಅಧಿಕಾರ ದುರ್ಬಳಕೆ ಕಂಡು ಬಂದಿರುವುದರಿಂದ ಮುಖ್ಯಮಂತ್ರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ ಎಂದರು ಎಂದು ಬಾರ್‌ & ಬೆಂಚ್‌ ವರದಿ ಉಲ್ಲೇಖಿಸಿದೆ.
ವರದಿ ಪ್ರಕಾರ, ಸಂಪುಟದ ಸಲಹೆಯು ಅತಾರ್ಕಿಕ ಅಥವಾ ಪಕ್ಷಪಾತದಿಂದ ಕೂಡಿದೆ ಎಂದು ಅನಿಸಿದರೆ ರಾಜ್ಯಪಾಲರು ವಿವೇಚನೆ ಬಳಸಿ ಸ್ವನಿರ್ಧಾರದ ಮೂಲಕ ದೂರಿನಲ್ಲಿ ಮೇಲ್ನೋಟಕ್ಕೆ ಪ್ರಕರಣ ಇರುವುದನ್ನು ನಿರ್ಧರಿಸಬಹುದು. ಮುಖ್ಯಮಂತ್ರಿ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಬಾರದು ಎಂದು ಶಿಫಾರಸ್ಸು ಮಾಡಿದ್ದ ಸಂಪುಟದ ತೀರ್ಮಾನವನ್ನು ತಿರಸ್ಕರಿಸಿರುವುದಕ್ಕೆ ರಾಜ್ಯಪಾಲರು ಸಕಾರಣ ನೀಡಿದ್ದಾರೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಭಟ್ಕಳ | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ; ಮಗನಿಗೆ ಗಲ್ಲು ಶಿಕ್ಷೆ, ಅಪ್ಪನಿಗೆ ಜೀವಾವಧಿ ಶಿಕ್ಷೆ ಪ್ರಕಟ

ರಾಜ್ಯಪಾಲರು ಅಭಿಯೋಜನಾ ಮಂಜೂರಾತಿಗೆ ಸಂಬಂಧಿಸಿದಂತೆ ಆರು ಪುಟಗಳ ಆದೇಶ ಮಾಡಿದ್ದಾರೆ. ಎಲ್ಲವನ್ನೂ ಪರಿಗಣಿಸಿ, ವಿವೇಚನಾಯುತ ನಿರ್ಧಾರ ಕೈಗೊಂಡಿದ್ದಾರೆ. ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್‌ 17ಎ ಅಧಿಕಾರದ ಮೂಲ ಗುಣವೇ ಕಾರ್ಯಕಾರಿ ಮತ್ತು ಆಡಳಿತಾತ್ಮಕವಾಗಿದೆ. ಇದರ ಅಡಿ ಅನುಮತಿ ನೀಡುವಾಗ ಆರೋಪಿಯ ವಾದ ಆಲಿಸಬೇಕಿಲ್ಲ. ಸೆಕ್ಷನ್‌ 17ಎ ಹಂತದಲ್ಲಿ ಸಹಜ ನ್ಯಾಯ ತತ್ವ ಅನ್ವಯಿಸುವುದಿಲ್ಲ. ಸೆಕ್ಷನ್‌ 19ರ ಹಂತದಲ್ಲೂ ಸಹಜ ನ್ಯಾಯತತ್ವ ಅನ್ವಯಿಸದು.
ಟಿ ಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪಕುಮಾರ ಅವರ ದೂರುಗಳ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರದಿದ್ದರೂ ಯಾವುದೇ ಪೂರ್ವಾಗ್ರಹ ಉಂಟಾಗದು. ಮುಖ್ಯಮಂತ್ರಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಸಂಪುಟ ಸಭೆ ನಡೆದಿದೆ ಎಂದ ಮಾತ್ರಕ್ಕೆ ಅದರ ಪ್ರಕಾರ ನಿರ್ಧರಿಸಲಾಗದು. ಏಕೆಂದರೆ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಇರಲಿಲ್ಲ ಎಂದು ಪಕ್ಷಪಾತ ಸಾಧ್ಯತೆ ಅಲ್ಲಗಳೆಯಲಾಗದು ಎಂದು ವಾದಿಸಿದರು.
ಮುಖ್ಯಮಂತ್ರಿಯ ವಿಚಾರದಲ್ಲಿ ಸಂಪುಟ ಸದಸ್ಯರ ಸಲಹೆ ಪಡೆಯಬಾರದು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ ಎಂದು ನ್ಯಾ. ನಾಗಪ್ರಸನ್ನ ಹೇಳಿದರು. ಅದಕ್ಕೆ ಮೆಹ್ತಾ ಅವರು “ಹೌದು. ರಾಜ್ಯಪಾಲರು ಬಯಸಿದರೂ ಸಂಪುಟ ಸದಸ್ಯರ ಸಲಹೆ ಪಡೆಯುವಂತಿಲ್ಲ” ಎಂದರು.

ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

ಸಂಪುಟ ಸಭೆಯ ನಿರ್ಣಯವು ಏಕೆ ಪಕ್ಷಪಾತದಿಂದ ಕೂಡಿದೆ ಎಂಬುದಕ್ಕೆ ರಾಜ್ಯಪಾಲರು ತಮ್ಮದೇ ನೋಟ್ಸ್‌ ಮಾಡಿದ್ದಾರೆ. ನಬಮ್‌ ರೇಬಿಯಾ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ರಾಜ್ಯಪಾಲರ ವಿವೇಚನೆಗೆ ಸಂಬಂಧಿಸಿದಂತೆ ಏನು ಹೇಳಿದೆ ಎಂಬುದನ್ನು ಡಾ. ಅಭಿಷೇಕ್‌ ಮನು ಸಿಂಘ್ವಿ ಗೊಂದಲ ಮಾಡಿಕೊಂಡಿದ್ದಾರೆ. ನಬಮ್‌ ರೇಬಿಯಾ ತೀರ್ಪಿನಲ್ಲಿರುವ ಸಂಪುಟದ ನಿರ್ಣಯದಲ್ಲಿನ ಪಕ್ಷಪಾತ ಸಾಧ್ಯತೆಗೆ ಸಂಬಂಧಿಸಿದಂತೆಯೂ ತೀರ್ಪುಗಳನ್ನು ಉಲ್ಲೇಖಿಸಿದ್ದೇನೆ. ಮುಖ್ಯಮಂತ್ರಿ ವಿರುದ್ಧ ಆತುರದಿಂದ ಅಭಿಯೋಜನಾ ಮಂಜೂರಾತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಸತ್ಯವಲ್ಲ. ಮೊದಲಿಗೆ ಮುಖ್ಯ ಕಾರ್ಯದರ್ಶಿಯಿಂದ ವರದಿ ಪಡೆಯುವುದು ಸೂಕ್ತ ಎಂದು ರಾಜ್ಯಪಾಲರು ತೀರ್ಮಾನಿಸಿದ್ದಾರೆ. ಶೋಕಾಸ್‌ ನೋಟಿಸ್‌ ಜಾರಿ ಮಾಡುವುದು ಆತುರದ ಕ್ರಮವಾಗದು. ಮುಖ್ಯಮಂತ್ರಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ನೀಡಲಾಗಿತ್ತು ಎಂದರು.
ಮುಡಾ ಪ್ರಕರಣದಲ್ಲಿ ತನಿಖೆ ಅಗತ್ಯ ಎಂದು ರಾಜ್ಯಪಾಲರು ಹೇಳಿದ್ದು, ತನಿಖೆಗೆ ಆದೇಶಿಸಿದ್ದಾರೆ ಎಂದು ಮೆಹ್ತಾ ಹೇಳಿದರು. ಆಗ ನ್ಯಾ. ನಾಗಪ್ರಸನ್ನ ಅವರು ವೈ ಕೆ ಸಬರ್‌ವಾಲ್‌ ತೀರ್ಪಿನಲ್ಲಿ ಆತುರದ ನಿರ್ಧಾರವು ತನಿಖೆಗೆ ಹಾನಿ ಉಂಟು ಮಾಡುವುದಿಲ್ಲ ಎಂದು ಹೇಳಲಾಗಿದೆ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮಧ್ಯಂತರ ಆದೇಶವನ್ನು ವಿಸ್ತರಿಸಿ, ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2:30ಕ್ಕೆ ಮುಂದೂಡಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement