ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೋಮವಾರ ಮತ್ತೆ ಮುಂದೂಡಿದೆ.
ಮುಡಾ ಹಗರಣದ ತನಿಖೆಗೆ ರಾಜ್ಯಪಾಲರು ಅಭಿಯೋಜನಾ ಮಂಜೂರಾತಿ ನೀಡಿರುವುದನ್ನು ವಜಾ ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ಮುಂದುವರಿಸಿತು.
“ಸುಣ್ಣಕ್ಕೆ ಬೆಣ್ಣೆ ಹಂಚಿಕೆ ಮಾಡಿರುವುದು ಈ ಪ್ರಕರಣದ ಆರೋಪ. ಭ್ರಷ್ಟಾಚಾರ ನಿರೋಧಕ ಕಾಯಿದೆಯ ಉದ್ದೇಶವೇ ಸಾರ್ವಜನಿಕ ಆಡಳಿತದಲ್ಲಿ ಶುದ್ಧತೆ ಕಾಯ್ದುಕೊಳ್ಳುವುದು ಆಗಿರುವುದರಿಂದ ರಾಜ್ಯಪಾಲರು ತನಿಖೆ ನಡೆಯಲು ಅಭಿಯೋಜನಾ ಮಂಜೂರಾತಿ ನೀಡಿದ್ದಾರೆ” ಎಂದು ಹಿರಿಯ ವಕೀಲ ಕೆ ಜಿ ರಾಘವನ್ ಸೋಮವಾರ ಪ್ರತಿಪಾದಿಸಿದರು. ಭ್ರಷ್ಟಾಚಾರ ತಡೆ ಕಾಯ್ದೆ ಉಲ್ಲೇಖಿಸಿ, ಕಾನೂನು ಬಾಹಿರವಾಗಿಲ್ಲದಿದ್ದರೂ ಪ್ರಭಾವ ಬಳಸಿ ಲಾಭ ಪಡೆದರೆ ಅದು ಅಪರಾಧ. ಅನುಕೂಲ ಪಡೆಯಲು ಅಧಿಕಾರಿ ಮೇಲೆ ಪ್ರಭಾವ ಬಳಸಿದರೂ ಅಪರಾಧ. ಪಡೆಯುವ ಅನುಕೂಲ ಕಾನೂನು ಬಾಹಿರವಾಗಿಲ್ಲದಿದ್ದರೂ ಅಪರಾಧ. ವೈಯಕ್ತಿಕ ಪ್ರಭಾವ ಬಳಸಿದರೂ ಅದು ಸೆಕ್ಷನ್ 7 ಅಡಿ ಅಪರಾಧ. ಒಬ್ಬ ಸಚಿವ ಇಲಾಖೆಯಲ್ಲದೇ ಬೇರೆಡೆ ಪ್ರಭಾವ ಬೀರಿದರೂ ಅದು ಅಪರಾಧ. ಸಾರ್ವಜನಿಕ ಆಡಳಿತದಲ್ಲಿ ಪಾವಿತ್ರ್ಯತೆ ತರಲು ಸೆಕ್ಷನ್ 7ಸಿ ಜಾರಿಗೆ ತರಲಾಗಿದೆ ಎಂದು ವಾದಿಸಿದರು.
ಕೇವಿಯಟರ್ ಆಗಿರುವ ನಾಲ್ಕನೇ ಪ್ರತಿವಾದಿ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪರವಾಗಿ ವಾದಿಸಿದ ಹಿರಿಯ ವಕೀಲ ಕೆ. ರಾಘವನ್ ಅವರು “ಸಾರ್ವಜನಿಕ ಹಿತಾಸಕ್ತಿ ಅಡಗಿರುವುದರಿಂದ ತನಿಖೆಗೆ ರಾಜ್ಯಪಾಲರು ಅಭಿಯೋಜನಾ ಮಂಜೂರಾತಿ ನೀಡಿರುವುದರ ಹಿಂದೆ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶವಿದೆ. ಮಾಧ್ಯಮಗಳಲ್ಲಿ ಮುಡಾ ಹಗರಣ ವರದಿಯಾದ ಬೆನ್ನಿಗೇ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಆನಂತರ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದೆ. ಇದು ಸಾರ್ವಜನಿಕ ನಂಬಿಕೆ ಹಾಳಾಗಿರುವುದಕ್ಕೆ ಉತ್ತರ. ಇಲ್ಲಿ ಉನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿರುವ ವ್ಯಕ್ತಿಯ ವಿರುದ್ಧ ತನಿಖೆ ಕೋರಲಾಗಿದೆ. ಕೊನೆಯಲ್ಲಿ ಸಿದ್ದರಾಮಯ್ಯ ಅವರು ಆರೋಪಮುಕ್ತವಾಗಬಹುದು. ಆದರೆ, ನ್ಯಾಯಾಲಯವು ಇಂಥ ವಿಚಾರಗಳಲ್ಲಿ ತನಿಖೆಗೆ ಬೆಂಬಲ ಸೂಚಿಸಬೇಕು” ಎಂದು ಮನವಿ ಮಾಡಿದರು.
“(ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ) ಪಾರ್ವತಿ ಅವರಲ್ಲದೇ ಬೇರೆ ಯಾವುದೇ ಸಾಮಾನ್ಯ ವ್ಯಕ್ತಿ ತಮ್ಮ ಭೂಮಿ ವಶಪಡಿಸಿಕೊಂಡಿರುವುದಕ್ಕೆ ಪರಿಹಾರ ಕೇಳಿದ್ದರೆ ಮುಡಾ ಆ ವ್ಯಕ್ತಿಗೆ ಇದಕ್ಕೆ ಹಕ್ಕು ಸಾಧನೆಯ ಬಗ್ಗೆ ಸಾಕ್ಷ್ಯ ತೋರಿಸುವಂತೆ ಕೇಳುತಿತ್ತು. ಆಗ ಆ ವ್ಯಕ್ತಿಯು ನ್ಯಾಯಾಲಯದ ಮೆಟ್ಟಿಲೇರಬೇಕಿತ್ತು. ಆದರೆ, ಪಾರ್ವತಿ ಅವರ ಪ್ರಕರಣಲ್ಲಿ ಅದೇನೂ ಆಗಿಲ್ಲ. ನಿಯಮಗಳನ್ನು ತಿದ್ದುಪಡಿ ಮಾಡಲಾಗಿದ್ದು, ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ” ಎಂದು ಆಕ್ಷೇಪಿಸಿದರು.
“ಮುಡಾದಲ್ಲಿ 2003-09ರ ನಡುವೆ 60:40 ಯೋಜನೆ ಜಾರಿಯಲ್ಲಿತ್ತು. ಆದರೆ, ಪಾರ್ವತಿ ಅವರಿಗೆ ನಿವೇಶನ ಹಂಚಲು 2015ರಲ್ಲಿ 50:50 ಯೋಜನೆಯನ್ನು ಮುಡಾ ಅಳವಡಿಸಿಕೊಂಡಿದೆ. ಯಾವ ನಿಬಂಧನೆಯಡಿ 14 ನಿವೇಶನಗಳನ್ನು ನೀಡಲಾಗಿದೆ?ಮುಡಾ ಆಕ್ಷೇಪಾರ್ಹವಾದ 3.16 ಎಕರೆ ಭೂಮಿಯನ್ನು ವಶಪಡಿಸಿಕೊಂಡಾಗ, ಆ ಜಮೀನಿನ ಮೌಲ್ಯ 3.24 ಲಕ್ಷ ರೂಪಾಯಿ ಆಗಿತ್ತು. ಹೀಗಿರುವಾಗ ಯಾವ ಮೌಲ್ಯ ಆಧರಿಸಿ 14 ನಿವೇಶನಗಳನ್ನು ನೀಡಲಾಗಿದೆ? ಮುಡಾ ಯಾವುದೇ ರೀತಿಯಲ್ಲಿಯೂ ವಿವೇಚನ ಬಳಸಿಲ್ಲ. ಸುಣ್ಣಕ್ಕೆ ಬೆಣ್ಣೆ ವಿನಿಮಯವೇ ಎಂದು ಪ್ರಶ್ನಿಸಿದರು. ಈ ಪ್ರಕರಣದಲ್ಲಿ ದುಬಾರಿ ಮೌಲ್ಯ ಇಲ್ಲದ 3.16 ಎಕರೆ ಜಮೀನಿಗೆ ಪ್ರತಿಷ್ಠಿತ ಬಡಾವಣೆಯಲ್ಲಿ 14 ನಿವೇಶನ ಹಂಚಿಕೆ ಮಾಡಲಾಗಿದೆ. ಇದು ಸರಿಯೋ, ತಪ್ಪೋ ಎಂಬುದು ನಿರ್ಧಾರವಾಗಲು ತನಿಖೆ ಆಗಬೇಕು” ಎಂದು ಪ್ರತಿಪಾದಿಸಿದರು.
“ಪಾರ್ವತಿ ಅವರಿಗೆ ನಿವೇಶನ ಹಂಚಿಕೆಯಲ್ಲಿ ಪಕ್ಷಪಾತಿ ಧೋರಣೆ ತಳೆಯಲಾಗಿದ್ದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಇದೆಲ್ಲವೂ ನಡೆದಿದೆ. 2017ರಲ್ಲಿ ಮುಡಾ ಕೈಗೊಂಡಿರುವ ನಿರ್ಣಯವೇ ಇಡೀ ಪ್ರಕರಣದ ಕೊಂಡಿಯಾಗಿದೆ” ಎಂದರು.
ವಾದ ಆಲಿಸಿದ ನ್ಯಾಯಾಲಯವು ಮಧ್ಯಂತರ ಆದೇಶ ವಿಸ್ತರಿಸಿ, ಅಡ್ವೊಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ ಅವರ ಕೋರಿಕೆಯಂತೆ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿತು.
ನಿಮ್ಮ ಕಾಮೆಂಟ್ ಬರೆಯಿರಿ