ಇನ್ಮುಂದೆ ಸರ್ಕಾರಿ ರಜಾ ದಿನಗಳಲ್ಲೂ ಆಸ್ತಿ ನೋಂದಣಿ ಮಾಡಬಹುದು…!

ಬೆಂಗಳೂರು: ಇನ್ಮುಂದೆ ಸರ್ಕಾರಿ ರಜಾ ದಿನಗಳಲ್ಲಿಯೂ ಆಸ್ತಿ ನೋಂದಣಿ (Property Registration) ಮಾಡುವ ಸೇವೆ ಲಭ್ಯವಿರಲಿದೆ.
ಅಕ್ಟೋಬರ್‌ 21ರಿಂದ ಶನಿವಾರ ಮತ್ತು ಭಾನುವಾರವೂ ನಿರ್ದಿಷ್ಟ ಉಪ ನೋಂದಣಾಧಿಕಾರಿ (Sub Registrar Office) ಕಚೇರಿಗಳಲ್ಲಿ ಈ ಸೇವೆ ಲಭ್ಯವಿರುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸರ್ಕಾರಿ ರಜಾ ದಿನಗಳಲ್ಲಿ ಪ್ರತಿ ನೋಂದಣಿ ಜಿಲ್ಲೆಗೂ ಒಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಈ ಸೇವೆ ಲಭ್ಯ ಇರಲಿದೆ. ಆಸ್ತಿ ನೋಂದಣಿ ಮಾಡಿಸಿಕೊಳ್ಳುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮುಂದಿನ ತಿಂಗಳು 21ರಿಂದ ಉಪನೋಂದಣಿ ಕಚೇರಿಗಳು ಶನಿವಾರ ಮತ್ತು ಭಾನುವಾರ ರಜೆ ದಿನಗಳಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರತಿ ನೋಂದಣಿ ಜಿಲ್ಲೆಯಲ್ಲಿ ಐದಾರು ನೋಂದಣಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಒಂದು ಕಚೇರಿ ಮಾತ್ರ ರಜೆ ದಿನದಲ್ಲಿ ಕಾರ್ಯನಿರ್ವಹಿಸಲಿದೆ. ರಜೆ ದಿನದಲ್ಲಿ ಕೆಲಸ ಮಾಡುವ ಕಚೇರಿಗೆ ಮಂಗಳವಾರದ ರಜೆ ನೀಡಲಾಗುತ್ತದೆ. ರಜೆ ದಿನಗಳಲ್ಲಿ ನೋಂದಣಿ ಜಿಲ್ಲೆಯ ಯಾವ ನೋಂದಣಿ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂಬುದರ ಕುರಿತು ಮೊದಲೇ ಪಟ್ಟಿ ಬಿಡುಗಡೆ ಮಾಡಿ ಮಾಹಿತಿ ನೀಡಲಾಗುತ್ತದೆ. ನೋಂದಣಿಯಾಗಿ ಸಾರ್ವಜನಿಕರು ಅರ್ಜಿ ಹಾಕಿದಾಗ ಯಾವ ಕಚೇರಿ ತೆರೆದಿರುತ್ತದೆ ಎಂಬ ಮಾಹಿತಿಯನ್ನು ಆನ್ಲೈನ್‌ ಮೂಲಕ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ವಾರದ ದಿನಗಳಲ್ಲಿ ದುಡಿಯುವ ವರ್ಗದ ಜನ ಕೆಲಸಗಳನ್ನು ಬಿಟ್ಟು ನೋಂದಣಿ ಕಚೇರಿಗೆ ಬರುವುದು ಕಷ್ಟವಾಗುತ್ತಿದೆ. ಹೀಗಾಗಿ ಶನಿವಾರ, ಭಾನುವಾರ ರಜಾ ದಿನಗಳಲ್ಲೂ ನೋಂದಣಿ ಕಚೇರಿ ತೆರೆಯಬೇಕೆಂಬ ಒತ್ತಾಯವಿತ್ತು. ಇದನ್ನು ಗಮನಿಸಿ ಸರ್ಕಾರದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಸೂಚನೆ ನೀಡಿದ್ದು, ಕಾನೂನು ತಿದ್ದುಪಡಿ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ಕಾಲ್ತುಳಿತ ಪ್ರಕರಣ | ಐಪಿಎಸ್‌ ಅಧಿಕಾರಿ ವಿಕಾಸಕುಮಾರ ಅಮಾನತು ಆದೇಶ ರದ್ದುಗೊಳಿಸಿದ ಸಿಎಟಿ; ಸರ್ಕಾರಕ್ಕೆ ಹಿನ್ನಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement